ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚಲು, ಹಾಟ್ ಮಿಕ್ಸ್ ಪ್ಲಾಂಟ್ ಆರಂಭಿಸಿದ್ದರೂ ಸಮರ್ಪಕವಾಗಿ ಕೆಲಸ ಆಗುತ್ತಿಲ್ಲ. ಹೀಗಾಗಿ, ಮುಖ್ಯ ಇಂಜಿನಿಯರ್ಗಳ ಸಭೆ ನಡೆಸಿದ ಆಡಳಿತಾಧಿಕಾರಿ ಹಾಗೂ ಆಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಲ್ಲೇಶ್ವರಂ ಐಪಿಪಿ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ, ಹಾಟ್ ಮಿಕ್ಸ್ ಪ್ಲಾಂಟ್ನ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಹೊರ ಹಾಕಿದ ಆಡಳಿತಧಿಕಾರಿ, ಪ್ರತಿನಿತ್ಯ ಹಾಟ್ ಮಿಕ್ಸ್ ಪ್ಲಾಂಟ್ನಲ್ಲಿ 10 ಗಂಟೆಗೆ 50 ರಿಂದ 60 ಟ್ರಕ್ ಡಾಂಬರು ತಯಾರಿಸಬಹುದಾಗಿದೆ. ಪ್ರಸ್ತುತ ಪ್ರತಿನಿತ್ಯ 10 ಲೋಡ್ ಮಾತ್ರ ಉತ್ಪಾದನೆಯಾಗುತ್ತಿದೆ. ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡಿ ವಲಯವಾರು ವಾರ್ಡ್ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಆದೇಶಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚಲು ವಲಯವಾರು ಪ್ರತ್ಯೇಕ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆ ನೀಡಿರುವ ಬಗ್ಗೆ, ಪ್ರತಿನಿತ್ಯ ವಲಯವಾರು ಎಷ್ಟು ಇಂಡೆಂಟ್ ಬರ್ತಿದೆ, ಹಾಟ್ ಮಿಕ್ಸ್ ಪ್ಲಾಂಟ್ ನಿಂದ ಎಷ್ಟು ಡಾಂಬರು ಉತ್ಪಾದನೆಯಾಗುತ್ತಿದೆ ಎಂಬುವುದರ ಬಗ್ಗೆ ಮಾಹಿತಿ ಕೊಡಲು ಹಾಗೂ ಡಿಎಲ್ಪಿ ಪೀರಿಯಡ್ ಇರುವ ಕಡೆ ಗುತ್ತಿಗೆದಾರರಿಂದಲೇ ರಸ್ತೆಗುಂಡಿಗಳನ್ನು ಮುಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಬೆಸ್ಕಾಂ ವತಿಯಿಂದ ಬಹುತೇಕ ಕಡೆಗಳಲ್ಲಿ ರೋಡ್ ಕಟ್ಟಿಂಗ್ ಮಾಡಲಾಗಿದೆ, ಇದರಿಂದ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೋಡ್ ಕಟ್ಟಿಂಗ್ ದುರಸ್ತಿ ಕಾರ್ಯ ಕೈಗೊಂಡು ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಬೇಕು ಎಂದರು.
ಆಯುಕ್ತರು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಕೂಡ ಏಕೆ ಸರಿಯಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೆ ಸಾಧ್ಯವಾಗುತ್ತಿಲ್ಲ. ಇರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ನಿರ್ದಿಷ್ಟ ಸಮಯದಲ್ಲಿ ಗುಂಡಿಗಳನ್ನು ಮುಚ್ಚುವ ಮೂಲಕ ಬೆಂಗಳೂರನ್ನು ಗುಂಡಿ ಮುಕ್ತ ನಗರವನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಟ್ ಮಿಕ್ಸ್ ಪ್ಲಾಂಟ್ನಿಂದ ನಗರದ ಕೇಂದ್ರ ಪ್ರಮುಖ ಭಾಗಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಿಗೆ ತಲಾ 2 ತಂಡಗಳು ಹಾಗೂ ಉಳಿದ 5 ವಲಯ (ಯಲಹಂಕ, ಮಹದೇಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಆರ್.ಆರ್.ನಗರ ) ಗಳಿಗೆ ತಲಾ 3 ತಂಡಗಳು ಮತ್ತು ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿಗೆ 10 ತಂಡಗಳು ಸೇರಿ ಒಟ್ಟು 31 ತಂಡಗಳನ್ನು ನಿಯೋಜನೆ ಮಾಡಿಕೊಂಡು, ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿದರು.