ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ಲಾಲ್ಬಾಗ್ ಸಮೀಪವಿರುವ ಮಾವಳ್ಳಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ಜಪ್ತಿ ಮಾಡಲು ಮುಂದಾದಾಗ ಬಿಬಿಎಂಪಿ ಅಧಿಕಾರಿಗಳು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಗಣೇಶ ಮೂರ್ತಿಯಲ್ಲಿ ಪಿಒಪಿ ಕೆಮಿಕಲ್ ರಾಸಾಯನಿಕಗಳು ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಷಗಳಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗದ ಕಾರಣ ಪಾಲಿಕೆ ನಗರದ ಅನೇಕ ಕಡೆ ದಿಢೀರ್ ಕಾರ್ಯಾಚರಣೆ ನಡೆಸಿದೆ. ಎರಡೂ ಸಂಸ್ಥೆಗಳು ಪ್ರತ್ಯೇಕ ತಂಡವಾಗಿ ಮೂರ್ತಿಗಳ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ, ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಅದರಂತೆ ಬುಧವಾರ ಆರ್.ವಿ.ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಲು ಮುಂದಾದಾಗ ಮಳಿಗೆ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಗಲಾಟೆಯಾಗಿದೆ. ನಂತರ ಕೆಲವರು ಧರ್ಮದ ಹೆಸರನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಕೊನೆಗೆ ಪೊಲೀಸರ ನೆರವಿನೊಂದಿಗೆ 16 ಪಿಒಪಿ ಮೂರ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಮ್ಮ ಗಣೇಶ ಮುಟ್ಟಬೇಡಿ:
ವಾರದ ಹಿಂದೆ ಲಾಲ್‌ಬಾಗ್ ಪಶ್ಚಿಮ ದ್ವಾರ ಬಳಿಯ ಶ್ರೀ ವಿನಾಯಕ ಸಂಸ್ಥೆ ಪಿಒಪಿ ಮೂರ್ತಿಗಳನ್ನು ಇಟ್ಟುಕೊಂಡಿರುವುದನ್ನು ಕಂಡು ದಕ್ಷಿಣ ವಲಯದ ಆರೋಗ್ಯಾಧಿಕಾರಿಗಳು ಸಂಸ್ಥೆ ಮಾಲೀಕರಿಗೆ ಪಿಒಪಿ ಮೂರ್ತಿ ಮಾರಾಟ ಮತ್ತು ದಾಸ್ತಾನು ಮಾಡದಂತೆ ನೋಟಿಸ್ ನೀಡಿದ್ದರು. ಆದರೂ, ಮಳಿಗೆ ಮಾಲೀಕರು ಪಿಒಪಿ ಮೂರ್ತಿಗಳನ್ನು ತೆರವು ಮಾಡಿರಲಿಲ್ಲ. ಹೀಗಾಗಿ ಬುಧವಾರ ಅಧಿಕಾರಿಗಳು ಮೂರ್ತಿಗಳ ಜಪ್ತಿಗೆ ಕಾರ್ಯಾಚರಣೆ ನಡೆಸಿದರು. ಅಧಿಕಾರಿಗಳು ಮೂರ್ತಿಗಳನ್ನು ಮುಟ್ಟುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಮಳಿಗೆಯವರು ಮತ್ತು ಇನ್ನಿತರರು ಕೇಸರಿ ಬಾವುಟವನ್ನು ಪ್ರದರ್ಶಿಸಿದ್ದಲ್ಲದೆ, ‘ನಮ್ಮ ಗಣೇಶ ಮುಟ್ಟಬೇಡಿ’ ಎಂದು ಘೋಷಣೆ ಕೂಗಲು ಆರಂಭಿಸಿದರು. ಆದರೂ, ಮೂರ್ತಿಗಳ ಜಪ್ತಿಗೆ ಮುಂದಾದಾಗ ಅಧಿಕಾರಿಗಳು ಮತ್ತು ಮಳಿಗೆಯವರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸರ ನೆರವು:
ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಮಳಿಗೆಯವರು ಕೇಳದಿದ್ದಾಗ ಕೊನೆಗೆ ಸ್ಥಳೀಯ ಪೊಲೀಸರ ನೆರವು ಪಡೆದು 16 ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದರು. ಮಳಿಗೆಯಲ್ಲಿ ಇನ್ನಷ್ಟು ಮೂರ್ತಿಗಳಿದ್ದು, ಅವುಗಳನ್ನು ಶೀಘ್ರದಲ್ಲಿ ಬೇರೆಡೆ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದರು.