ಬೆಂಗಳೂರು: ನವೆಂಬರ್ ತಿಂಗಳ ಒಳಗೆ ಅಂಗಡಿ, ಮಳಿಗೆಗಳು, ಉದ್ಯಮಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿದ ಬಿಬಿಎಂಪಿ ನಿಯಮಕ್ಕೆ ಸೊಪ್ಪು ಹಾಕದ ಸಂಸ್ಥೆಯೊಂದು ಮೊದಲು ನಗರದ ಮೂಲಸೌಕರ್ಯ ವ್ಯವಸ್ಥೆ ಸರಿಪಡಿಸಿ ಅಂತ ಪಾಠ ಮಾಡಿದೆ.
![notice](https://etvbharatimages.akamaized.net/etvbharat/prod-images/5301895_notice.jpg)
ಹೌದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಈ ರೀತಿಯ ಪತ್ರ ಬರೆದಿದ್ದು, ಕನ್ನಡ ನಾಮಫಲಕ ಅಂತ ಕಿರುಕುಳ ಮಾಡುವ ಮೊದಲು ಕೆಲ ಸಮಸ್ಯೆಗಳನ್ನು ಬಗೆಹರಿಸಿ ಅಂತ ಅವುಗಳನ್ನು ಪಟ್ಟಿ ಮಾಡಿ , ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ, ಮೇಯರ್ ಗೌತಮ್ ಕುಮಾರ್ಗೆ ಪತ್ರ ಬರೆದಿದ್ದಾರೆ.
ನೀವು ಮೊದಲು ರಸ್ತೆ ಗುಂಡಿ ಮುಚ್ಚಿ, ಗುಣಮಟ್ಟದ ಡಾಂಬಾರು ಹಾಕಿ, ಕಸದಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ಅದನ್ನು ತಡೆಯಿರಿ, ಟ್ರಾಫಿಕ್ ಸಮಸ್ಯೆ, ನೀರಿನ ನಿರ್ವಹಣೆ ತಡೆಯಿರಿ. ಅದನ್ನು ಬಿಟ್ಟು ಸಾಕಷ್ಟು ಉದ್ಯಮಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕನ್ನಡ ನಾಮಫಲಕ ಅಂತ ಸಮಸ್ಯೆ ನೀಡಬೇಡಿ ಎಂದು ಪತ್ರ ಬರೆದಿದ್ದಾರೆ .
ಅಲ್ಲದೆ 2020ರ ಎಪ್ರಿಲ್ 30ರ ವರೆಗೂ ಕಾಲಾವಕಾಶ ನೀಡಬೇಕು ಎಂದು ಪತ್ರ ಬರೆದಿದ್ದಾರೆ. ಒಟ್ಟಿನಲ್ಲಿ ಬಿಬಿಎಂಪಿ ಆದೇಶಕ್ಕೂ ಕ್ಯಾರೇ ಅನ್ನದ ಎಫ್ಕೆಸಿಸಿಐ ಈ ರೀತಿಯಾಗಿ ಪತ್ರ ಬರೆದಿರೋದು ವಿವಾದಕ್ಕೆ ಕಾರಣವಾಗಿದೆ.
ಬಿಬಿಎಂಪಿ ಮೂವತ್ತು ಹಿರಿಯ ಆರೋಗ್ಯಾಧಿಕಾರಿಗಳಿಗೆ ನೋಟೀಸ್ : ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮ ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲವಾದ ಮೂವತ್ತು ವಾರ್ಡ್ಗಳ , 30 ಮಂದಿ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಪಾಲಿಕೆ ನೋಟೀಸ್ ಹೊರಡಿಸಿದೆ.
![letter](https://etvbharatimages.akamaized.net/etvbharat/prod-images/5301895_bbmp.jpg)
ಪ್ಲಾಸ್ಟಿಕ್ ನಿಷೇಧವಾಗಿರುವ ಹಿನ್ನಲೆ, ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವಲ್ಲಿ ದಾಳಿ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವವರಿಗೆ ದಂಡ ವಿಧಿಸಬೇಕು. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಯಂತ್ರಿಸುವ ಜವಾಬ್ದಾರಿ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ನೀಡಲಾಗಿದೆ. ಆದ್ರೆ ಜವಾಬ್ದಾರಿ ಮರೆತು, ಕಳಪೆ ಕಾರ್ಯಕ್ಷಮತೆ ಇರುವ ಆರೋಗ್ಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸು ಜಾರಿ ಮಾಡಲಾಗಿದೆ.