ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿದ ಕಸ ನಿರ್ವಹಣೆ ಉಪ ನಿಯಮ 2020ಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪ್ರತ್ಯೇಕವಾಗಿ ಕಸ ನಿರ್ವಹಣೆಗೆ ಇನ್ಮುಂದೆ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಭೆ ಸಮಾರಂಭಗಳಿಂದ ಬಿಬಿಎಂಪಿ ಶುಲ್ಕ ಸಂಗ್ರಹಿಸಲಿದೆ.
ಅಲ್ಲದೇ ನಿಯಮ ಉಲ್ಲಂಘಿಸಿ ಕಸ ಬಿಸಾಡುವವರಿಗೆ, ಪ್ಲಾಸ್ಟಿಕ್ ಬಳಕೆದಾರರಿಗೆ ಭಾರೀ ದಂಡ ವಿಧಿಸಲು ಅನುಮೋದನೆ ಸಿಕ್ಕಿದೆ. ಕಸ ನಿರ್ವಹಣೆಗೆ ಪಾಲಿಕೆ ವರ್ಷಕ್ಕೆ 1000 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಆದ್ರೆ ಆಸ್ತಿ ತೆರಿಗೆಯಿಂದ ಸಂಗ್ರಹವಾಗ್ತಿರೋ ಉಪಕರ ಕೇವಲ 40 ಕೋಟಿ ರೂ. ಹೀಗಾಗಿ ಬಿಬಿಎಂಪಿ ಈ ನಿಯಮ ಜಾರಿಗೆ ಮುಂದಾಗಿದೆ. ಪ್ರಮುಖವಾಗಿ ಕಸದಿಂದ ಗೊಬ್ಬರ ಮಾಡುವವರಿಗೆ, ಬಯೋಗ್ಯಾಸ್ ಉತ್ಪಾದಿಸುವವರಿಗೆ ಶೇಕಡಾ 50 ರಷ್ಟು ಸೇವಾ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆ.
ಈ ಕುರಿತು ಮಾತನಾಡಿದ, ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ರಂದೀಪ್, ಆಸ್ತಿ ತೆರಿಗೆ ಜೊತೆಯೇ ಘನತ್ಯಾಜ್ಯ ನಿರ್ವಹಣೆ ಸೆಸ್ ಬರುತ್ತಿತ್ತು. ಆದ್ರೆ ಇನ್ಮುಂದೆ ಪ್ರತ್ಯೇಕವಾಗಿ ಘನತ್ಯಾಜ್ಯ ನಿರ್ವಹಣೆ ಉಪಕರವನ್ನು ವಿಧಿಸಲಾಗುವುದು. ಪೌರಕಾರ್ಮಿಕರ ಕೈಯಲ್ಲಿ ನಿತ್ಯ ನಗರ, ಬೀದಿ ಸ್ವಚ್ಛ ಮಾಡುತ್ತೇವೆ. ಎಸ್ ಡಬ್ಲ್ಯೂ ಎಮ್- 2016 (solid waste management) ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ನಗರ ಪಾಲಿಕೆ ಸೇವಾ ಶುಲ್ಕ ವಿಧಿಸುವ ಅಧಿಕಾರ ಇದೆ. ಇದನ್ನು ಬಳಕೆ ಮಾಡಿಕೊಂಡು ಬಿಬಿಎಂಪಿ ಬೈಲಾದಲ್ಲಿ ಈ ಅಂಶ ಅಳವಡಿಸಿಕೊಂಡಿದೆ.
ಘನತ್ಯಾಜ್ಯ ನಿರ್ವಹಣೆಗೆ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ಸೇವಾಶುಲ್ಕ ವಿಧಿಸುತ್ತಿದ್ದೇವೆ. ಜಲಮಂಡಳಿ, ಬೆಸ್ಕಾಂ ಸಂಸ್ಥೆಗಳು ಸೇವಾಶುಲ್ಕ ವಿಧಿಸುವ ರೀತಿ ಮನೆ ಬಾಗಿಲಿಗೆ ಬಂದು ಕಸ ತೆಗೆದುಕೊಳ್ಳುವುದಕ್ಕೆ ಸೇವಾ ಶುಲ್ಕ ವಿಧಿಸಲಾಗುತ್ತದೆ ಎಂದರು. ಪ್ರತೀ ಮನೆಗೆ ಇನ್ನೂರು ರುಪಾಯಿ ಪ್ರತೀ ತಿಂಗಳು ಶುಲ್ಕ ಬೀಳಲಿದೆ. 10 ಕೆಜಿ ಗಿಂತ ಹೆಚ್ಚಿದ್ರೆ ಮಾತ್ರ ಬಲ್ಕ್ ಜನರೇಷನ್ ಅಂತ ಇತ್ತು. ಈಗ ನೂರು ಕೆಜಿ ವರೆಗೆ ಕಸವನ್ನು ಬಿಬಿಎಂಪಿಯೇ ನಿರ್ವಹಣೆ ಮಾಡಲಿದೆ. ವಿವಿಧ ಹಂತಗಳಲ್ಲಿ 600 ರಿಂದ 14,000 ದ ವರೆಗೆ ಶುಲ್ಕ ನಿಗದಿ ಮಾಡಲಾಗಿದೆ ಎಂದರು.