ಬೆಂಗಳೂರು: ಬಿಬಿಎಂಪಿಯ ಮಾಸಿಕ ಕೌನ್ಸಿಲ್ ಸಭೆಗೆ ಬೆರಳೆಣಿಕೆಯಷ್ಟು ಪಾಲಿಕೆ ಸದಸ್ಯರು ಮಾತ್ರ ಹಾಜರಾಗಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ವಲಯ ಮಟ್ಟದಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸಿಲ್ ವೀಕ್ಷಣೆ ಮಾಡುತ್ತಿದ್ದಾರೆ. ಆದರೆ, ವಲಯಮಟ್ಟದಲ್ಲೂ ಪಾಲಿಕೆ ಸದಸ್ಯರ ಭಾಗವಹಿಸುವಿಕೆಯಲ್ಲಿ ಇಳಿಕೆಯಾಗಿದೆ. ಅಧಿಕಾರ ಅವಧಿಯ ಕೊನೆಯ ಸಭೆ ಆದರೂ ಕೊರೊನಾ ಭೀತಿ ಹಿನ್ನೆಲೆ ಪಾಲಿಕೆ ಸದಸ್ಯರು ಭಾಗಿಯಾಗಿಲ್ಲ. ಪಾಲಿಕೆ ಸಭಾಂಗಣದಲ್ಲಿ ಕುರ್ಚಿಗಳು ಖಾಲಿ ಖಾಲಿ ಇವೆ.
ಬಿಐಇಸಿ ವಿಚಾರದಲ್ಲಿ ಆರಂಭದಲ್ಲೇ ಗದ್ದಲ ಉಂಟಾಯಿತು. 10 ಸಾವಿರ ಬೆಡ್ ಆಸ್ಪತ್ರೆ ಉದ್ಘಾಟನೆಯಾಗಿದೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೇಳಿದಾಗ, 10 ಸಾವಿರ ಬೆಡ್ ಕೊಟ್ಟಿಲ್ಲ. ಕೇವಲ 1,700 ಬೆಡ್ ಕೊಡಲಾಗಿದೆ ಎಂದು ವಿಪಕ್ಷ ನಾಯಕ ವಾಜಿದ್ ಸ್ಪಷ್ಟನೆ ನೀಡಿದರು. ಆಗ ಸಭೆಯಲ್ಲಿ ಗದ್ದಲ ಉಂಟಾಯಿತು. ಇನ್ನು ಕೊರೊನಾ ಗಲಾಟೆ ನಡುವೆಯೇ ಪಾಲಿಕೆ ಸದಸ್ಯರ ಅಧಿಕಾರ ವಿಸ್ತರಣೆಗೆ ನಿರ್ಣಯ ತೆಗೆದುಕೊಳ್ಳಿ ಎಂದು ಪಕ್ಷಾತೀತವಾಗಿ ಮನವಿ ಮಾಡಿದರು.
ಕೊರೊನಾ ತಡೆಯುವಲ್ಲಿ ಪಾಲಿಕೆ ಆಡಳಿತ ವಿಫಲ - ವಾಜಿದ್: ಕೋವಿಡ್ ಕೇರ್ ಸೆಂಟರ್ಗಳಲ್ಲಿ ವೆಂಟಿಲೇಟರ್ ಇಲ್ಲ. ಪೇಷೆಂಟ್ ಶಿಫ್ಟ್ ಮಾಡಿ ತುರ್ತು ಸಂದರ್ಭ ಬಂದರೆ ಮುಂದೇನು ? ಕೂಡಲೇ ಕೊರೊನಾ ಸೋಂಕಿತರ ಪರವಾಗಿ ನಾವ್ ಇದ್ದೀವಿ ಎಂದು ಮಂತ್ರಿಗಳು ಕೆಲಸ ಮಾಡಬೇಕಿದೆ. ಆದರೆ, ಯಾರ ಸಪೋರ್ಟ್ ಕೂಡಾ ಇಲ್ಲ, ಅನುದಾನವೂ ಬಂದಿಲ್ಲ ಎಂದರು.
ಗುಣಮುಖರಾಗ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು ಹೇಗೆ?: 1500, 1300, 2000 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಡುತ್ತಿದ್ದರೂ, 14 ದಿನದಲ್ಲಿ ಶೇಕಡಾ 80 ರಷ್ಟು ಮಂದಿ ಗುಣಮುಖರಾಗಬೇಕಿತ್ತು. ಆದರೆ ಹೆಲ್ತ್ ಬುಲೆಟಿನ್ಗಳಲ್ಲಿ ಕೇವಲ 600 - 700 ಮಂದಿ ಗುಣಮುಖರೆಂದು ಬರುತ್ತಿದೆ. ದೆಹಲಿಯಲ್ಲಿ ಶೇ 87 ರಷ್ಟು ರಿಕವರಿ ಇದೆ. ತಮಿಳು ನಾಡಿನಲ್ಲಿ ಶೇ 73 ರಷ್ಟಿದೆ. ಬೆಂಗಳೂರಲ್ಲಿ ಮಾತ್ರ ಶೇ 23ರಷ್ಟು ಯಾಕೆ ಇದೆ ಎಂದು ಪ್ರಶ್ನಿಸಿದರು. ನಿನ್ನೆ 2 ಸಾವಿರ ಮಂದಿ ಗುಣಮುಖರಾಗಬೇಕಿತ್ತು. ಆದರೆ ಕೇವಲ 700 ಮಂದಿ ಗುಣಮುಖರಾಗಿದ್ದಾರೆ ಎಂದರು.
ಪರಿಶಿಷ್ಟ ಪಂಗಡದ ರೋಗಿಗಳಿಗೆ ಉಚಿತ ಚಿಕಿತ್ಸೆ ಎನ್ನಲಾಗುತ್ತಿದೆ. ಆದರೆ ಸರ್ಕಾರ ದುಡ್ಡು ಕೊಡುತ್ತಿದೆಯಾ ಎಂದು ಗೊತ್ತಾಗಬೇಕು. ರೋಗಿಗಳೂ ದುಡ್ಡು ಕೊಡೊದು, ಸರ್ಕಾರವೂ ದುಡ್ಡು ಕೊಡುವುದರ ಮೂಲಕ ಮೆಡಿಕಲ್ ಮಾಫಿಯಾ ನಡೆಯುತ್ತಿದೆ ಎಂದು ವಾಜಿದ್ ಆರೋಪಿಸಿದರು. ವೆಂಟಿಲೇಶನ್, ಐಸಿಯು ಸಮಸ್ಯೆಯಿದ್ದು, ಹೆಚ್ಚಳ ಮಾಡಿ ಎಂದು ಮನವಿ ಮಾಡಿದರು. ಮೂರ್ನಾಲ್ಕು ತಿಂಗಳಾದ್ರೂ ವಾರ್ ರೂಂ ನಿಂದ ಮಾಹಿತಿ ಬಂದಿಲ್ಲ ಎಂದರು.