ಬೆಂಗಳೂರು: ನಗರದ ಹೊಂಬೆಗೌಡನಗರ ವಾರ್ಡ್-145ರ ಬನ್ನೇರಘಟ್ಟ ರಸ್ತೆ, ಮೈಕೋ ಫ್ಯಾಕ್ಟರಿ ಹಿಂಭಾಗ, ಲಕ್ಕಸಂದ್ರ ಗ್ರಾಮದ ಸರ್ವೆ ನಂ. 14ರಲ್ಲಿ ಅನಧಿಕೃತವಾಗಿ ಒತ್ತುವರಿ ಆಗಿರುವ ಸರ್ಕಾರಿ ಜಾಗವನ್ನು ಬಿಬಿಎಂಪಿ ಮೇಯರ್ ಎಂ.ಗೌತಮ್‌ಕುಮಾರ್ ಪರಿಶೀಲಿಸಿದರು.
ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ಮಾರ್ಬಲ್ ಅಂಗಡಿಗಳನ್ನಿಟ್ಟು ವ್ಯಾಪಾರ ನಡೆಸಲಾಗುತ್ತಿದೆ. ಈ ಸಂಬಂಧ ತಪಾಸಣೆ ನಡೆಸಿ ಸುಮಾರು 10.04 ಎಕರೆ ಪಾಲಿಕೆ ಆಸ್ತಿಯನ್ನು ಕೂಡಲೇ ಸರ್ವೇ ಮಾಡಿ, ಪಾಲಿಕೆಯ ಒಡೆತನಕ್ಕೆ ತೆಗೆದುಕೊಳ್ಳಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮೇಯರ್ ಸೂಚಿಸಿದ್ದಾರೆ.
ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಮೇಯರ್, ಸದ್ಯ ಪಾಲಿಕೆಯ ಒಡೆತನಕ್ಕೆ ಒಳಪಟ್ಟ ಆಸ್ತಿಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸ್ಥಳ ತಪಾಸಣೆ ಪ್ರಾರಂಭಿಸಲಾಗಿದೆ. ಒತ್ತುವರಿ ಮಾಡಿರುವ ಪ್ರದೇಶವನ್ನು ಸರ್ವೇ ಮಾಡಿ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ನಾಮಫಲಕ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮಾಪನ ತಂಡ-03 ರವರ ಕಚೇರಿಯಿಂದ ಅಳತೆ ಮಾಡಿ, ಸರ್ವೆ ನಕ್ಷೆಯನ್ನು ತಯಾರಿಸಿರುತ್ತಾರೆ. ಆದರೆ, ಸದರಿ ಸರ್ವೆ ವರದಿಯಲ್ಲಿ ಬ್ಲಾಕ್-03 ಮತ್ತು ಬ್ಲಾಕ್-04 ರಂತೆ ಗುರುತಿಸಲಾಗಿರುವ ಬ್ಲಾಕ್‌ಗಳಲ್ಲಿ ಕೂಡಲೇ ಅಧಿಕೃತವಾಗಿ ಸರ್ವೆ ಮಾಡಿ ಅತಿಕ್ರಮಿತ ಸರ್ಕಾರಿ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು. ಅತಿಕ್ರಮ ಪ್ರದೇಶವನ್ನು ಒತ್ತುವರಿ ವಿಚಾರವಾಗಿ ಅಧಿಕಾರಿಗಳು ಶಾಮೀಲಾಗಿದ್ದರೆ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಲು ವಿಶೇಷ ಆಯುಕ್ತರಿಗೆ (ಆಸ್ತಿಗಳು) ಸೂಚಿಸಲಾಗಿದೆ.