ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಸಂಬಂಧ ಸೆಪ್ಟೆಂಬರ್ 27ರಂದು ಚುನಾವಣೆ ನಿಗದಿಗೊಳಿಸಿ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 27ರ ಬೆಳಗ್ಗೆ 11:30 ಗಂಟೆಗೆ ಚುನಾವಣಾ ಸಭೆಯನ್ನು ಕರೆಯಲಾಗಿದೆ. ಚುನಾವಣೆಯು ಬಿಬಿಎಂಪಿ ಕೇಂದ್ರ ಕಚೇರಿಯ ಪೌರ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 28ಕ್ಕೆ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಇದರೊಂದಿಗೆ ಮೈತ್ರಿ ಆಡಳಿತವೂ ಕೊನೆಯಾಗುವ ಸಾಧ್ಯತೆ ಇದ್ದು, ಬಿಜೆಪಿಯು ಆಡಳಿತದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಯ ಪ್ರಮುಖ ಪಾಲಿಕೆ ಸದಸ್ಯರು ಮೇಯರ್ ರೇಸ್ನಲ್ಲಿದ್ದು, ಮೇಯರ್ ಹಾಗೂ ಉಪಮೇಯರ್ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಸೆಪ್ಟೆಂಬರ್ 27ರಂದು ಉತ್ತರ ಸಿಗಲಿದೆ.