ಬೆಂಗಳೂರು : ವೃದ್ಧರು ಹಾಗೂ ವಿಶೇಷಚೇತನರಿಗೆ ಲಸಿಕಾ ಕೇಂದ್ರಗಳಿಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಂತಹವರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಯೋಜನೆ ಆರಂಭಿಸಿದೆ.
ಮನೆಯಿಂದ ಹೊರ ಬರಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ ವೃದ್ಧರು, ವಿಶೇಷಚೇತನರು ಹಾಗೂ ಬೇರೆ ಬೇರೆ ಖಾಯಿಲೆಯಿಂದ ಬಳಲುತ್ತಿರುವವರು ಮನೆಯಿಂದ ಹೊರ ಬಂದರೆ ಅಥವಾ ವ್ಯಾಕ್ಸಿನ್ಗಾಗಿ ಕೇಂದ್ರಗಳಿಗೆ ಹೋದರೆ ಕೋವಿಡ್ ಸೋಂಕು ಹರಡುವ ಅಥವಾ ಇತರ ರೋಗಗಳು ಬರುವ ಭೀತಿ ಇರುತ್ತದೆ.
ಇದರಿಂದಾಗಿ ಈವರೆಗೂ ವ್ಯಾಕ್ಸಿನ್ ಪಡೆಯಲು ಹಿಂಜರಿದಿದ್ದರು. ಇದೀಗ ಇವರು ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತರಾದ ಡಿ.ರಂದೀಪ್ ಮಾತನಾಡಿ, ನಗರದಲ್ಲಿ ಮನೆ ಮನೆಗೆ ಬಂದು ವ್ಯಾಕ್ಸಿನ್ ಕೊಡುವ ಸಾಧ್ಯತೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆ ಕೇಳಿ ಬಂದಿದ್ದವು.
ಹೀಗಾಗಿ, ಎರಡು ವಾರಗಳಿಂದ ಈಚೆಗಷ್ಟೇ ಅನುಮತಿ ಸಿಕ್ಕಿದೆ. ಓಡಾಟದ ಸಮಸ್ಯೆ ಇರುವವರಿಗೆ ಮಾತ್ರ ಅವರಿದ್ದಲ್ಲೇ ಹೋಗಿ ವ್ಯಾಕ್ಸಿನ್ ಕೊಡಲಾಗುತ್ತದೆ. ಬಿಬಿಎಂಪಿ ಸಹಾಯವಾಣಿ 1533 ಅಥವಾ ಸ್ಥಳೀಯ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ವ್ಯವಸ್ಥೆ ಆಗಲಿದೆ ಎಂದರು.
ವ್ಯಾಕ್ಸಿನ್ ಪೂರೈಕೆ ಹೆಚ್ಚಳ ಬಳಿಕ ಯಾರೊಬ್ಬರಿಗೂ ನಗರದಲ್ಲಿ ವ್ಯಾಕ್ಸಿನ್ ನಿರಾಕರಿಸುತ್ತಿಲ್ಲ. ದಿನಕ್ಕೆ 5 ಲಕ್ಷದವರೆಗೂ ಲಸಿಕೆ ಹಂಚಿಕೆ ಮಾಡಲಾಗಿದೆ. ಇದೇ ರೀತಿ ಅಗತ್ಯ ಇರುವವರಿಗೆ ಮನೆ ಬಾಗಿಲಿಗೆ ಹೋಗಿ ವ್ಯಾಕ್ಸಿನ್ ಹಂಚಿಕೆ ಮಾಡಲು ಬಿಬಿಎಂಪಿ ಆರಂಭಿಸಿದೆ.