ಬೆಂಗಳೂರು: ನಗರದಲ್ಲಿ ಬೆಡ್ ಅಭಾವದಿಂದ ಕೋವಿಡ್ ಸೋಂಕಿತ ತಬ್ರೇಝ್ ಮೃತಪಟ್ಟಿದ್ದು, ಸೂಕ್ತ ಸಮಯದಲ್ಲಿ ಬೆಡ್ ನೀಡದೆ ನಿರಾಕರಿಸಿದ ವಸಂತನಗರದ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಗೆ ಬಿಬಿಎಂಪಿ ಶೋಕಾಸ್ ನೋಟಿಸ್ ನೀಡಿದೆ.
ಮುಂದಿನ 24 ಗಂಟೆಯೊಳಗೆ ನೋಟಿಸ್ಗೆ ಉತ್ತರಿಸಲು ಗಡುವು ನೀಡಿದೆ. ಸರ್ಕಾರದ ನಿಯಮದಂತೆ ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಸರ್ಕಾರಿ ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡಬೇಕು. ಈ ಹಾಸಿಗೆ ಖಾಲಿ ಇರುವ ಹಾಗೂ ಭರ್ತಿಯಾಗಿರುವ ವಿವರಗಳನ್ನು ಸೆಂಟ್ರಲೈಸ್ಡ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ ನಮೂದಿಸಬೇಕು ಎಂಬ ನಿಯಮವಿದೆ.
108 ಸಹಾಯವಾಣಿ ಮೂಲಕ ಈ ಸಿಸ್ಟಂನಲ್ಲಿ ಬೆಡ್ ಮೀಸಲಿಟ್ಟು ಹೋಗಿದ್ದರೂ ರೋಗಿಯನ್ನು ದಾಖಲಿಸಿಕೊಳ್ಳದೆ ನಿರಾಕರಿಸಿದ್ದಾರೆ. ಸರಿಯಾದ ಸಮಯಕ್ಕೆ ವ್ಯಕ್ತಿಗೆ ಚಿಕಿತ್ಸೆ ನೀಡದ ಹಿನ್ನಲೆ ಕೋವಿಡ್ ರೋಗಿ ಮೃತಪಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಪ್ರತಿಕ್ರಿಯೆ ನೀಡದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯದಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.