ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿದ ಅನಾಹುತಗಳು ಮತ್ತೆ ಮೂರನೇ ಅಲೆಯಲ್ಲಿ ಉಂಟಾಗದಂತೆ ತಡೆಯಲು ಮುಂದಾಗಿರುವ ಬಿಬಿಎಂಪಿ, ತನ್ನ ವ್ಯಾಪ್ತಿಯಲ್ಲಿ ಪರಿಣಿತ ವೈದ್ಯರ ಸಮಿತಿ ರಚನೆಗೆ ಸಿದ್ಧತೆ ನಡೆಸಿದೆ. ಖಾಸಗಿ, ಸರ್ಕಾರಿ ಹಾಗೂ ಪಾಲಿಕೆಯ ಮಕ್ಕಳ ತಜ್ಞ ವೈದ್ಯರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಆರೋಗ್ಯ ವಿಶೇಷ ಆಯುಕ್ತ ರಂದೀಪ್ ಅವರನ್ನೊಳಗೊಂಡ 15 ಜನರ ಸಮಿತಿ ಸಿದ್ಧವಾಗ್ತಿದೆ. ಬಿಬಿಎಂಪಿಯ ಕ್ಲಿನಿಕಲ್ ಮುಖ್ಯ ಆರೋಗ್ಯಾಧಿಕಾರಿಯಾಗಿರುವ ಡಾ.ನಿರ್ಮಲಾ ಬುಗ್ಗಿ, ತಜ್ಞ ವೈದ್ಯರಾದ ಆನಂದ್ ಮುಂತಾದವರು ಇರಲಿದ್ದಾರೆ.
3ನೇ ಅಲೆ ಮಕ್ಕಳನ್ನು ಬಾಧಿಸಿದರೆ ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಹೇಗೆ, ಆಸ್ಪತ್ರೆಗಳು- ವೈದ್ಯರು ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸಮಿತಿಯ ಪರಿಣಿತ ವೈದ್ಯರು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಅದರಂತೆ ಬಿಬಿಎಂಪಿ ತ್ವರಿತವಾಗಿ ಕಾರ್ಯನಿರ್ವಹಹಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಈಟಿವಿ ಭಾರತಗೆ ತಿಳಿಸಿದರು.
ಸರ್ಕಾರಕ್ಕೆ ಅಗತ್ಯತೆಗಳ ಮನವಿ ಸಲ್ಲಿಸಲು ಇಂದು ಸಭೆ:
ನಗರದ ಆಸ್ಪತ್ರೆಗಳಿಗೆ ಬೇಕಾದ ಮೂಲಸೌಕರ್ಯಗಳು, ಇತರ ಅನುದಾನಗಳ ಅಗತ್ಯತೆ ಪಾಲಿಕೆಗಿದ್ದು, ಇಂದು ಸಂಜೆ 4 ಗಂಟೆಗೆ ನಡೆಯುವ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಾರ್ವಜನಿಕ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ತಿಳಿಸಿದರು.
ಪೂರ್ವ ವಲಯದಲ್ಲಿ ದಿನೇ ದಿನೆ ಪ್ರಕರಣ ಹೆಚ್ಚಳ:
ನಗರದಲ್ಲಿ ಹಗಲು ಹೊತ್ತಿನಲ್ಲಿ ಸಂಪೂರ್ಣವಾಗಿ ಅನ್ಲಾಕ್ ಇರಲಿದ್ದು, ಕೋವಿಡ್ ಹೆಚ್ಚಾಗುವ ಭೀತಿ ಉಂಟಾಗಿದೆ. ಪ್ರಮುಖವಾಗಿ ಬಿಬಿಎಂಪಿ ಪೂರ್ವ ವಲಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ 102 ಇದ್ದ ಪ್ರಕರಣ, ಇಂದು 122 ಆಗಿದೆ. ಜೊತೆಗೆ ನಗರದ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯೂ 520 ರಿಂದ 727 ಕ್ಕೆ ಏರಿಕೆಯಾಗಿದೆ.
ಶೇ. 70 ರಷ್ಟು ವ್ಯಾಕ್ಸಿನೇಷನ್:
3ನೇ ಅಲೆ ಸಿದ್ಧತೆ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರದಲ್ಲಿ ಶೇ 50 ಕ್ಕಿಂತ ಹೆಚ್ಚು ಜನರಿಗೆ ಈಗಾಗಲೇ ವ್ಯಾಕ್ಸಿನ್ ಹಂಚಲಾಗಿದೆ. ಜುಲೈ ಅಂತ್ಯದೊಳಗೆ ಫಲಾನುಭವಿಗಳಿಗೆ ಶೇ. 70 ರಷ್ಟು ವ್ಯಾಕ್ಸಿನೇಷನ್ ಸಂಪೂರ್ಣಗೊಳಿಸಲಾಗುವುದು ಎಂದರು.
ಮಕ್ಕಳ ಬಗ್ಗೆ ನಿರ್ಧರಿಸಲಾಗುವುದು:
ನಗರದಲ್ಲಿ ಸೆರೋ ಪಾಸಿಟಿವಿಟಿ ಸರ್ವೇ ನಡೆಸುವ ಬಗ್ಗೆಯೂ ಸಿದ್ಧತೆ ನಡೆಸಲಾಗುತ್ತಿದ್ದು, ಎಷ್ಟು ಜನರಿಗೆ ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ಸರ್ವೇ ಮಾಡಲಾಗುವುದು ಎಂದ ಅವರು, 3ನೇ ಅಲೆಯ ತಡೆಗೆ ಪ್ರತ್ಯೇಕವಾದ ತಜ್ಞರ ಸಮಿತಿ ರಚಿಸಿ, ಅವರ ಜೊತೆಗೂ ಸಮಾಲೋಚನೆ ನಡೆಸಿ, ಮಕ್ಕಳಿಗೆ ಬೇಕಾದ ಅವಶ್ಯಕತೆಗಳನ್ನು ಸಿದ್ಧತೆ ಮಾಡಲಾಗುವುದು. ಆರಂಭದಲ್ಲಿ ಹಿರಿಯ ವ್ಯಕ್ತಿಗಳ ವ್ಯಾಕ್ಸಿನೇಷನ್ ಮುಗಿಸಿ ನಂತರ ಮಕ್ಕಳ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಆದರೆ ನಗರಕ್ಕೆ ಇನ್ನೂ ಕೂಡಾ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಆದೇಶ ಬಂದಿಲ್ಲ, ಲಸಿಕೆಯ ಪೂರೈಕೆಯೂ ನಗರಕ್ಕೆ ಸಾಲುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಯಾದಗಿರಿ ಬಾಲಕಿ ಹೆಸರು: ಈಕೆಯ ಸಾಧನೆಯೇನು ಗೊತ್ತೇ?