ಬೆಂಗಳೂರು : ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆ ಜುಲೈ ತಿಂಗಳಲ್ಲಿ ಸೀಲ್‌ಡೌನ್ ಆಗಿರುವ ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ ಆರ್ ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಇನ್ನೂ ಒಂದು ತಿಂಗಳು ತೆರೆಯದಿರಲು ಬಿಬಿಎಂಪಿ ನಿರ್ಧರಿಸಿದೆ.
ಮಾರ್ಚ್ ತಿಂಗಳಿನಿಂದ ಲಾಕ್‌ಡೌನ್ ಪ್ರಾರಂಭವಾದ ಹಿನ್ನೆಲೆ ತೀವ್ರ ನಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳು ಜುಲೈ 31ಕ್ಕೆ ಮಾರುಕಟ್ಟೆ ಸೀಲ್‌ಡೌನ್ ತೆರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಇನ್ನೂ ಒಂದು ತಿಂಗಳು ಮಾರುಕಟ್ಟೆ ಬಂದ್ ಆಗುವುದರಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್ ವಿ ಗೋಪಿ ತಿಳಿಸಿದ್ದಾರೆ.
![BBMP Extended Seal Down of Markets](https://etvbharatimages.akamaized.net/etvbharat/prod-images/8242818_612_8242818_1596196489306.png)
ಕಂಟೇನ್ಮೆಂಟ್ ವಲಯಗಳ ಲಾಕ್‌ಡೌನ್ ಅವಧಿಯನ್ನು ಅಗಸ್ಟ್ 31ರವರೆಗೆ ಮುಂದುವರೆಸುವಂತೆ ಕೇಂದ್ರ ಸರ್ಕಾರದ ಆದೇಶವಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಬೆಂಗಳೂರಿನ ಬಹುತೇಕ ಕಡೆ ಕಂಟೇನ್ಮೆಂಟ್ ವಲಯಗಳಿವೆ. ಮಾರುಕಟ್ಟೆಯಲ್ಲಿ ಮಾತ್ರ ಯಾಕೆ ಸೀಲ್‌ಡೌನ್ ಮಾಡಲಾಗಿದೆ ಎಂದು ಗೋಪಿ ಪ್ರಶ್ನಿಸಿದ್ದು, ಈ ಕುರಿತು ಸಂಸದರು, ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.