ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ, ನಗರದ ಮತದಾರರ ಪಟ್ಟಿ ಸಿದ್ಧತೆಗೆ ಬಿಬಿಎಂಪಿ ಮುಂದಾಗಿದೆ. ಅಂತಿಮ ಪಟ್ಟಿ ಪ್ರಕಟವಾಗುವ ದಿನ ನವೆಂಬರ್ 30ರಿಂದ 2021ರ ಜನವರಿ 15ಕ್ಕೆ ಪರಿಷ್ಕರಣೆ ಆಗಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಕ್ಟೋಬರ್ 31ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳು ಅಂತಿಮವಾಗಲಿದೆ. ಈ ವೇಳೆ ಹೊಸ ಮತದಾರರ ಸೇರ್ಪಡೆ, ಹೆಸರು ಪರಿಷ್ಕರಣೆ ಹಾಗೂ ಮೃತಪಟ್ಟವರ ಹೆಸರನ್ನು ಕೈಬಿಡುವ ಕಾರ್ಯಚಟುವಟಿಕೆ ನಡೆಯಲಿವೆ. ಅಲ್ಲದೆ ಮತಗಟ್ಟೆಗಳ ವಿಭಾಗೀಕರಣ, ಮರುಜೋಡಣೆ, ಪನರ್ರಚನೆ ಆಧಾರಿತ ಮತಗಟ್ಟೆ ವ್ಯಾಪ್ತಿಯ ಗಡಿ ಅಂತಿಮಗೊಳಿಸುವುದು ಮತ್ತು ಮತದಾರರ ಪಟ್ಟಿಗೆ ಅನುಮೋದನೆ ಪಡೆಯುವುದು ನಡೆಯುತ್ತದೆ.
ನವೆಂಬರ್ 1ರಿಂದ 15ರ ಒಳಗೆ ಪೂರಕ ಮತ್ತು ಸಮಗ್ರ ಕರುಡು ಮತದಾರರ ಪಟ್ಟಿ ಸಿದ್ಧವಾಗಲಿದೆ. ಮತದಾರರ ಪಟ್ಟಿ ಪರಿಷ್ಕರಣೆ ನವೆಂಬರ್ನಲ್ಲಿ ಆರಂಭವಾಗಿ, ನ.16ಕ್ಕೆ ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಡಿ. 15ರ ವೇಳೆಗೆ ಮತದಾರರ ಪಟ್ಟಿಯ ಹಕ್ಕು ಮತ್ತು ಆಕ್ಷೇಪ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದು 2021ರ ಜನವರಿ ಐದರಂದು ಪೂರ್ಣಗೊಳ್ಳಲಿದ್ದು, ಜ. 14ರಂದು ಮತದಾರರ ಪಟ್ಟಿಯ ಪೂರಕ ಪಟ್ಟಿ ಮುದ್ರಿಸಿ, ಜನವರಿ 15ರಂದು ನವೀಕೃತ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.