ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ಟಾರ್ಗೆಟ್ 150 ಸ್ಥಾನಗಳ ಗುರಿಯೊಂದಿಗೆ ಬಿಜೆಪಿ ಚುನಾವಣಾ ಸಿದ್ಧತೆ ಆರಂಭಿಸಿದ್ದು, ಗೆಲುವಿನ ನೀಲಿನಕ್ಷೆ ರಚನೆ ಕುರಿತು ಪಾಲಿಕೆ ವ್ಯಾಪ್ತಿಯ ಸಚಿವರು ಮತ್ತು ಶಾಸಕರ ಮಹತ್ವದ ಸಭೆ ನಡೆಸಲಾಯಿತು. ಯಾವಾಗ ಚುನಾವಣೆ ಎದುರಾದರೂ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಯಿತು.
ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹಾ ನಗರದ ಸಚಿವರು, ಶಾಸಕರು, ಪ್ರಮುಖ ಮುಖಂಡರ ಜೊತೆ ಸಭೆ ನಡೆಸಲಾಯಿತು. ಸಂಸದರಾದ ಡಿ ವಿ ಸದಾನಂದಗೌಡ, ತೇಜಸ್ವಿ ಸೂರ್ಯ, ಸಚಿವರಾದ ಆರ್ ಅಶೋಕ್, ಬೈರತಿ ಬಸವರಾಜು, ಗೋಪಾಲಯ್ಯ, ವಿ ಸೋಮಣ್ಣ, ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್, ಎಂ ಕೃಷ್ಣಪ್ಪ ಭಾಗಿಯಾಗಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ನಡೆದ ಬೆಂಗಳೂರು ಭಾಗದ ಬಿಜೆಪಿ ಮುಖಂಡರ ಮೊದಲ ಸಭೆ ಇದಾಗಿದ್ದು, ಬೂತ್ ವ್ಯಾಪ್ತಿಯಲ್ಲಿ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲಾಯಿತು. ಚುನಾವಣಾ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಬಾರಿ 150 ಸ್ಥಾನಗಳ ಗುರಿಯೊಂದಿಗೆ ಚುನಾವಣೆ ಎದುರಿಸಿ ಟಾರ್ಗೆಟ್ ರೀಚ್ ಮಾಡುವ ಮೂಲಕ ಬಿಬಿಎಂಪಿಯಲ್ಲಿ ಕಮಲ ಅರಳಿಸಬೇಕು. ಆ ಮೂಲಕ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಾನ ಸಿಗುವಂತೆ ರಹದಾರಿ ಕಲ್ಪಿಸಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಯಿತು. ಬೂತ್ ಗಳಲ್ಲಿ ಪಕ್ಷ ಸಂಘಟನೆ ಯಾವ ರೀತಿ ಇದೆ, ದುರ್ಬಲ ಬೂತ್ಗಳ ಬಲವರ್ಧನೆ, ಪ್ರತಿ ಬೂತ್ಗಳನ್ನು ಶೇ.50 ರಷ್ಟು ಮತ ಬಿಜೆಪಿಗೆ ಬರುವಂತೆ ಸಂಘಟಿಸಬೇಕು ಎನ್ನುವ ಕುರಿತು ಚರ್ಚೆ ನಡೆಯಿತು.
ಸಭೆ ನಂತರ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಬಿಬಿಎಂಪಿ ಚುನಾವಣೆ ಸಂಬಂಧಿಸಿದ ಸಲಹೆಯನ್ನ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದೆವು. ಚುನಾವಣಾ ರಣತಂತ್ರ ಮಾಡಲು ಚರ್ಚೆ ಮಾಡಲಾಯ್ತು. ಬಿಬಿಎಂಪಿಯಲ್ಲಿ 140-150 ಸ್ಥಾನ ಗೆಲ್ಲಲ್ಲು ಸ್ಟ್ರಾಟರ್ಜಿ ಮಾಡಲಾಯ್ತು. ಯಾವ ವಿಚಾರದ ಮೇಲೆ ಚುನಾವಣೆ ಎದುರಿಸಬೇಕು ಎಂಬುದರ ಬಗ್ಗೆ ಚಿಂತಿಸಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಚುನಾವಣೆಗೆ ಆಗಸ್ಟ್ 25 ರಂದು ಮತದಾರರ ಕರಡು ಪಟ್ಟಿ ಪ್ರಕಟ