ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಬೆಡ್ ನೀಡುವಲ್ಲಿ ಕಳ್ಳಾಟ ಆಡುತ್ತಿರುವುದರಿಂದ ಬಳಕೆ ಮಾಡದೇ ಉಳಿದಿರುವ ಹಾಸಿಗೆಗಳನ್ನು ಬಿಬಿಎಂಪಿ ಸೀಲ್ ಮಾಡಲು ಮುಂದಾಗಿದೆ.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ವಿಡಿಯೋ ಕಾನ್ಪರೆನ್ಸ್ ಮುಖಾಂತರ ಸಭೆ ನಡೆಸಿದ, ಆಯುಕ್ತ ಮಂಜುನಾಥ್ ಪ್ರಸಾದ್ ಈ ಬಗ್ಗೆ ಮಾತನಾಡಿ, ನಗರದ 50 ರಿಂದ 100 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ 50 ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಎಷ್ಟು ಸೋಂಕಿತರು ದಾಖಲಾಗಿದ್ದಾರೆ, ಎಷ್ಟು ಹಾಸಿಗೆ ಮೀಸಲಿಡಲಾಗಿದೆ ಎಂಬ ವಿವರ ಕೇಳಲಾಗಿದೆ. ಈ ವೇಳೆ ಕೆಲವು ಆಸ್ಪತ್ರೆಗಳು ತಮ್ಮ ಆಸ್ಪತ್ರೆಯ ಕೆಲ ಹಾಸಿಗೆಗಳನ್ನು ಬಳಸುತ್ತಿಲ್ಲ ಎಂದು ಹೇಳಿದ್ದು, ಅವುಗಳನ್ನು ಕೊಡುವಂತೆ ಕೇಳಲಾಗಿದೆ ಎಂದರು.
ಅಲ್ಲದೇ ನಿರ್ಧಿಷ್ಟ ಹಾಸಿಗೆಗಳನ್ನು ವಿವಿಧ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟುರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ವೈದ್ಯರು, ಸಿಬ್ಬಂದಿ ಕೊರತೆಯಿಂದ ಹಾಸಿಗೆಗಳನ್ನು ಬಳಸುತ್ತಿಲ್ಲ ಎಂದು ಹೇಳಿವೆ. ಈ ರೀತಿ ಬಳಕೆಯಾಗದೇ ಉಳಿದಿರುವ ಹಾಸಿಗೆಗಳನ್ನು ಪಾಲಿಕೆಯಿಂದ ಸೀಲ್ ಮಾಡಲಾಗುವುದು ಎಂದು ತಿಳಿಸಿದರು.
ಸೀಲ್ ಮಾಡಿದಾಗ, ಆಸ್ಪತ್ರೆಯವರು ಸರ್ಕಾರ ಹಾಗೂ ಪಾಲಿಕೆಯ ಗಮನಕ್ಕೆ ತರದೇ, ಪಾಲಿಕೆ ಶಿಫಾರಸು ಮಾಡದ ಬೇರೆ ರೋಗಿಗಳ ಚಿಕಿತ್ಸೆಗೆ ಬಳಸಲು ಆಗುವುದಿಲ್ಲ. ಒಟ್ಟು 90 ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಶೇಕಡಾ 50 ರಷ್ಟು ಹಾಸಿಗೆಗಳನ್ನು ನೀಡಿವೆ. ಪ್ರಸ್ತುತ ಪಾಲಿಕೆಗೆ ಐದು ಸಾವಿರ ಹಾಸಿಗೆ ಲಭ್ಯವಾಗಿದ್ದು, ಬಳಸಲಾಗುತ್ತಿದೆ. ಐವತ್ತು ಆಸ್ಪತ್ರೆಗಳಿಂದ ಐನೂರು ಹಾಸಿಗೆಗಳು ಲಭ್ಯ ಆಗಬೇಕಿದೆ.