ಬೆಂಗಳೂರು: ಇಂದು ಬಿಬಿಎಂಪಿ ಮಾಸಿಕ ಸಭೆ ನಡೆಯಲಿದೆ. ವಾರ್ಡ್ಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ವ್ಯವಸ್ಥಿತವಾಗಿ ನಡೆಯದ ಬಗ್ಗೆ, ಹೋಂ ಐಸೋಲೇಷನ್ ನಲ್ಲಿರುವವರಿಗೆ ಆಹಾರ ಸಾಮಾಗ್ರಿ ಪೂರೈಸುವಲ್ಲಿ ವಿಳಂಬವಾಗಿರುವ ಬಗ್ಗೆ ಕಾರ್ಪೋರೇಟರ್ಗಳು ಮೇಯರ್, ಆಯುಕ್ತರನ್ನು ಪ್ರಶ್ನಿಸಲು ಸಿದ್ಧರಿದ್ದಾರೆ.
ಈಗಾಗಲೇ ಯಶವಂತಪುರ ಪಾಲಿಕೆ ಸದಸ್ಯ ಜಿಕೆ ವೆಂಕಟೇಶ್ ಈ ಬಗ್ಗೆ ಕೌನ್ಸಿಲ್ನಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ. ಬಹುತೇಕ 198 ವಾರ್ಡ್ಗಳಲ್ಲೂ ಇದರ ಕೊರತೆ ಇದ್ದು, ಇಡೀ ದಿನ ಗದ್ದಲ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಕಟ್ಟಡಗಳ ಉಪವಿಧಿ 2019, ರಸ್ತೆ ಗುಂಡಿಗೆ ಶುಲ್ಕ, ಪೌರಕಾರ್ಮಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಸಾಕುನಾಯಿ ಪರವಾನಗಿ ಬೈಲಾ ಚರ್ಚೆಯಾಗುವ ಸಾಧ್ಯತೆ ಇದೆ.
ಕಟ್ಟಡ ಉಪವಿಧಿ-2019 ಪಾಲಿಕೆ ವ್ಯಾಪ್ತಿಯ ಕಟ್ಟಡ ನಿರ್ಮಾಣದ ಕುರಿತು ಚರ್ಚೆಗೆ ಬರಲಿದೆ. ಕಟ್ಟಡಗಳ ಉಪವಿಧಿ ರಚಿಸಿ 16 ವರ್ಷ ಆಗಿದೆ. ಇದಾದ ಮೇಲೆ ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಗರದ ಸುರಕ್ಷತೆ ಹಾಗೂ ಪಾಲಿಕೆಯ ಆದಾಯ ದೃಷ್ಟಿಯಿಂದ ಬಿಬಿಎಂಪಿ ಕಟ್ಟಡಗಳ ಉಪವಿಧಿ-2019 (ಕರಡು)ರಚನೆ ಮಾಡಲಾಗಿದೆ. ಇದರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಕಟ್ಟಡಗಳ ವ್ಯಾಪ್ತಿಯಲ್ಲಿ ಹಸರೀಕರಣಕ್ಕೆ ಉತ್ತೇಜನ, ಮಳೆ ನೀರು ಕೊಯ್ಲು ಹಾಗೂ ಕಸ ವಿಲೇವಾರಿ ನಿರ್ವಹಣೆ ನಿಯಮಗಳನ್ನು ಸೇರಿಸಲಾಗಿದೆ. ಅಲ್ಲದೆ, ಪಾಲಿಕೆಯ ಆದಾಯ ದೃಷ್ಟಿಯಿಂದಲೂ ಕೆಲವು ಬದಲಾವಣೆಗಳನ್ನು ಇದರಲ್ಲಿ ಮಾಡಿಕೊಳ್ಳಲಾಗಿದೆ.
ರಸ್ತೆ ಅಗೆದರೆ ಹಣ ನೀಡಬೇಕು:
ನಗರದಲ್ಲಿ ಬೇಕಾಬಿಟ್ಟಿ ರಸ್ತೆ ಅಗೆಯುವುದಕ್ಕೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಗುಂಡಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಓಎಫ್ ಸಿ (ಆಪ್ಟಿಕಲ್ ಫೈಬರ್ ಕೇಬಲ್) ಅಳವಡಿಕೆ ವಿಚಾರಕ್ಕೂ ಅನ್ವಯವಾಗಲಿದೆ. ಒಂದು ಮೀಟರ್ ಅಗಲ ,ಒಂದು ಮೀಟರ್ ಉದ್ದ ರಸ್ತೆ ಅಗೆದರೆ ಅದಕ್ಕೆ ಹತ್ತು ಸಾವಿರ ರೂ. ಪಾಲಿಕೆಗೆ ನೀಡಬೇಕು. ಪ್ರತೀ ಕಿ.ಮೀಟರ್ಗೆ 1.30 ಲಕ್ಷ ಪಾಲಿಕೆ ಪಾವತಿಸಬೇಕಾಗುತ್ತದೆ.
ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಆಹಾರ ಶುಚಿತ್ವ ಹಾಗೂ ರುಚಿ ಕಡಿಮೆ ಇದ್ದು, ಪ್ರತ್ಯೇಕ ಟೆಂಡರ್ ಅಥವಾ ಪೌರಕಾರ್ಮಿಕರ ಹಾಜರಾತಿಯ ಆಧಾರದ ಮೇಲೆ 20 ರೂ. ನೀಡಲು ಚಿಂತಿಸಲಾಗಿದೆ. ಸಾಕು ನಾಯಿ ಬೈಲಾ ಪ್ರಸ್ತಾವನೆ ಸಹ ಹಲವು ತಿಂಗಳಿನಿಂದ ನನೆಗುದಿಗೆ ಬಿದ್ದಿದೆ. ನಗರದಲ್ಲಿ ನಾಯಿ ಸಾಕುವವರು ಕಡ್ಡಾಯವಾಗಿ ನಾಯಿಗಳಿಗೆ ಚಿಪ್ ಅಳವಡಿಸಿಕೊಳ್ಳಬೇಕು,ಸೀಮಿತ ಸಂಖ್ಯೆಯಲ್ಲಿ ನಾಯಿಗಳನ್ನು ಸಾಕಬೇಕು ಹಾಗೂ ನಾಯಿಗಳಿಗೆ ಎಬಿಸಿ ಮಾಡಿಸಬೇಕು ಎಂದು ಬೈಲಾದಲ್ಲಿ ಪ್ರಸ್ತಾವನೆ ಇದೆ.