ಬೆಂಗಳೂರು: ಪಾದರಾಯನಪುರ ಪಕ್ಕದ ಜಗಜೀವನ್ ರಾಂ ನಗರ ವಾರ್ಡ್ -136ರ ವಿನಾಯಕ ನಗರಕ್ಕೆ ಬಿಬಿಎಂಪಿ ಆಯುಕ್ತರು ಭೇಟಿ ನೀಡಿ ಕಂಟೇನ್ಮೆಂಟ್ ವಲಯದಲ್ಲಿ ಪರಿಶೀಲನೆ ನಡೆಸಿದರು.
ಮೇ 20ರಂದು ಪಿ-1397 ವ್ಯಕ್ತಿಗೆ ಸೋಂಕು ತಗುಲಿತ್ತು. ಹೀಗಾಗಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು. ವಿನಾಯಕ ನಗರದ ರಸ್ತೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಈಗಾಗಲೇ 8 ಮಂದಿ ಪ್ರಾಥಮಿಕ ಸಂಪರ್ಕಿತರು, 6 ಮಂದಿ ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ. ಇದೀಗ ಮನೆ ಮಾಲೀಕರ ಕುಟುಂಬವನ್ನು ದ್ವಿತೀಯ ಸಂಪರ್ಕಿತರು ಎಂದು ಕ್ವಾರಂಟೈನ್ ಮಾಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿವರ್ಧಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ತಪ್ಪಿದ್ದಲ್ಲಿ ದಂಡ ಹಾಕಲು ಹೆಚ್ಚುವರಿ ಮಾರ್ಷಲ್ಗಳನ್ನು ನಿಯೋಜಿಸಲು ಸೂಚಿಸಲಾಗಿದೆ.
ಪಾದರಾಯನಪುರ ವಾರ್ಡ್-135 ವ್ಯಾಪ್ತಿಯಲ್ಲಿ ಇದುವರೆಗೆ 430 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 190 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಳಿದವರ ರಿಪೋರ್ಟ್ ಬರುವುದು ಬಾಕಿಯಿದೆ.