ಬೆಂಗಳೂರು: ಕೋವಿಡ್ ನಿರ್ವಹಣೆಗೆ ನಗರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೆ.ಎ.ಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ಮಲ್ಲೇಶ್ವರಂ ಐಪಿಪಿ ಸೆಂಟರ್‌ನಲ್ಲಿ ಕೆ.ಎ.ಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ವಲಯವಾರು ನೇಮಿಸಿರುವ ಹಿರಿಯ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಘಸಂಸ್ಥೆಗಳು, ಸ್ವಯಂಸೇವಕರ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ಜೊತೆಗೆ ಕಂಟೈನ್‌ಮೆಂಟ್ ವಲಯಗಳ ಘೋಷಣೆ, ಸೋಂಕಿತರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವುದು, ಸಿಸಿಸಿ ಸೆಂಟರ್‌ಗಳಿಗೆ ಸ್ಥಳಾಂತರಿಸುವ ಉಸ್ತುವಾರಿ ಅಧಿಕಾರಿಗಳಿಂದ ಆಯುಕ್ತರು ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಮಂಜುನಾಥ್ ಪ್ರಸಾದ್, ವಾರ್ಡ್ ಸಮಿತಿಗಳನ್ನು ಕೊರೊನಾ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲಾಗುವುದು. ಐನೂರು ಮನೆಗೆ ಹತ್ತು ಜನರ ಸ್ವಯಂಸೇವಕರ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಕೋವಿಡ್ ಟೆಸ್ಟ್, ಆಹಾರ ಪೂರೈಕೆ ಕುರಿತು ಇವರು ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಐಇಸಿ ಕೋವಿಡ್ ಕೇರ್ ಸೆಂಟರ್‌ನ ಗುತ್ತಿಗೆದಾರರು ಖರ್ಚು ವೆಚ್ಚದ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆಯುಕ್ತರು, ಪಾಲಿಕೆ ಕಡೆಯಿಂದ ಕಮಿಟಿ ರಚನೆ ಮಾಡಿ, ಮಾರುಕಟ್ಟೆಯ ದರ ನೋಡಿ ಹಣ ನೀಡಲಾಗುತ್ತದೆ. 6 ವಸ್ತುಗಳಿಗೆ 4,800 ರೂ. ಹಾಕಿದ್ದಾರೆ. ಗುತ್ತಿಗೆದಾರರು 7,500 ರೂ. ಕೇಳುತ್ತಿದ್ದಾರೆ. ಈಗ ದರ ಬದಲಾವಣೆ ಮಾಡಲು ಆಗುವುದಿಲ್ಲ. ಸಿಎಂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲಾ ನಿಂತಿದೆ ಎಂದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಡಿ.ರಂದೀಪ್, ಬಸವರಾಜು, ನವೀನ್ ರಾಜ್ ಸಿಂಗ್ ಇದ್ದರು.