ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖವಾದ 12 ಜಂಕ್ಷನ್‌ಗಳನ್ನು ಉನ್ನತ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಕ್ರಮವಹಿಸಲಾಗುತ್ತಿದ್ದು, ಪಾಲಿಕೆ ಕೇಂದ್ರ ಕಚೇರಿಯಲ್ಲಿ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿರುವ ಜಂಕ್ಷನ್‌ಗಳ ಪ್ರಾತ್ಯಕ್ಷಿಕೆಯನ್ನು ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ವೀಕ್ಷಿಸಿದರು.
ನಗರದ ಪ್ರಮುಖ 12 ಜಂಕ್ಷನ್‌ಗಳನ್ನು ಅಧ್ಯಯನ ನಡೆಸಿ ಸುಗಮ ವಾಹನ ಸಂಚಾರಕ್ಕೆ ಅಗತ್ಯ ಇಂಜಿನಿಯರಿಂಗ್ ಮಾರ್ಪಾಡುಗಳನ್ನು ಮಾಡಿಕೊಂಡು ವಿನ್ಯಾಸ ತಯಾರಿಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡುವ ಸಲುವಾಗಿ ವಾಸ್ತು ಶಿಲ್ಪಿಗಳು ವಿವಿಧ ಪರಿಕಲ್ಪನೆಯಡಿ ಜಂಕ್ಷನ್‌ಗಳಿಗೆ ವಿನ್ಯಾಸಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಅನುಷ್ಠಾನಕ್ಕೆ ತಂದು ನಗರದ ಜಂಕ್ಷನ್‌ಗಳ ಸೌಂದರ್ಯೀಕರಣ ಹೆಚ್ಚಿಸಲು ಕ್ರಮವಹಿಸಬೇಕು ಎಂದು ಆಡಳಿತಾಧಿಕಾರಿ ಗೌರವ್ ಗುಪ್ತಾ ತಿಳಿಸಿದರು.
ಚಾಲುಕ್ಯ ವೃತ್ತ ಜಂಕ್ಷನ್‌ನಲ್ಲಿ ಚಾಲುಕ್ಯರ ಕಾಲದ ಗತವೈಭವ ಮರುಕಳಿಸುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ಬೀದಿ ದೀಪ ಹಾಗೂ ಬೊಲಾರ್ಡ್‌ಗಳನ್ನು ಶಿಲಾನ್ಯಾಸದ ಮಾದರಿಯಲ್ಲಿ ವಿನ್ಯಾಸೊಳಿಸಿ ಅಳವಡಿಸುವುದು. ಪಾದಚಾರಿ ಮಾರ್ಗಗಳ ಸೌಂದರ್ಯೀಕರಣಕ್ಕೂ ಹೆಚ್ಚು ಒತ್ತು ನೀಡಲಾಗಿದೆ. ಇನ್ನು ಅನಿಲ್ ಕುಂಬ್ಳೆ ಜಂಕ್ಷನ್ ಬಳಿ ಚಿನ್ನಸ್ವಾಮಿ ಕ್ರೀಡಾಂಗಣವಿದ್ದು, ಕ್ರೀಡಾ ಆಸಕ್ತಿಯ ಪರಿಕಲ್ಪನೆಯಡಿ ಜಂಕ್ಷನ್ ವಿನ್ಯಾಸಗೊಳಿಸುವುದು. ಮೈಸೂರು ಬ್ಯಾಂಕ್ ವೃತ್ತವನ್ನ ಪ್ರಸಿದ್ಧ ಕರಗ ಮಹೋತ್ಸವದ ವೈಭವದ ಮಾದರಿಯಲ್ಲಿ ವಿನ್ಯಾಸಗೊಳಿಸುವುದು. ಇದೇ ಮಾದರಿಯಲ್ಲಿ ಇನ್ನುಳಿದ ಜಂಕ್ಷನ್‌ಗಳಲ್ಲಿ ವಿವಿಧ ಪರಿಕಲ್ಪನೆಯಡಿ ಆಕರ್ಷಣೀಯವಾಗುವಂತೆ ಮಾಡುವುದು ಪಾಲಿಕೆಯ ಯೋಜನೆಯಾಗಿದೆ.
ಜಂಕ್ಷನ್‌ಗಳನ್ನು ಅಭಿವೃದ್ಧಿಗೊಳಿಸಿದ ನಂತರ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಉಂಟಾಗಬಾರದು. ಜೊತೆಗೆ ಪಾದಚಾರಿ ಮಾರ್ಗಗಳನ್ನು ಪಾದಚಾರಿ ಸ್ನೇಹಿಯಾಗಿ ವಿನ್ಯಾಸಗೊಳಿಸಬೇಕು. ಅಭಿವೃದ್ಧಿಪಡಿಸುವ ಜಂಕ್ಷನ್‌ಗಳ ವಿನ್ಯಾಸವನ್ನು ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಸಮನ್ವಯದೊಂದಿಗೆ ಜಂಕ್ಷನ್ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪಾಲಿಕೆ ಆಡಳಿತಾಧಿಕಾರಿ ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತ (ಯೋಜನೆ) ಮನೋಜ್ ಜೈನ್, ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರಾದ ಪ್ರಹ್ಲಾದ್, ವಾಸ್ತುಶಿಲ್ಪಿಗಳು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
12 ಜಂಕ್ಷನ್‌ಗಳ ವಿವರ ಕೆಳಗಿನಂತಿದೆ
1.ಚಾಲುಕ್ಯ ವೃತ್ತ
2.ಲಾಲ್‌ಬಾಗ್ ಪಶ್ಚಿಮ ದ್ವಾರ ವೃತ್ತ
3.ಮೈಸೂರು ಬ್ಯಾಂಕ್ ಜಂಕ್ಷನ್
4. ಕ್ವೀನ್ಸ್ ಸ್ಟಾಚು ವೃತ್ತ(ಕಬ್ಬನ್ ಪಾರ್ಕ್) ಮತ್ತು ಅನಿಲ್ ಕುಂಬ್ಳೆ ಜಂಕ್ಷನ್
5. ಟ್ರಿನಿಟಿ ವೃತ್ತ
6. ಕಮ್ಮನಹಳ್ಳಿ ಜಂಕ್ಷನ್
7. ಬಾಣಸವಾಡಿ ಮುಖ್ಯರಸ್ತೆ(100ಅಡಿ ರಸ್ತೆ) ಜಂಕ್ಷನ್
8. ಕೋಲ್ಸ್ ರಸ್ತೆ– ಮಾಸ್ಕ್ ರಸ್ತೆ ಜಂಕ್ಷನ್
9. ನವರಂಗ್ ಜಂಕ್ಷನ್
10.ಮಾಗಡಿ ರಸ್ತೆ ಜಂಕ್ಷನ್
11.ಕೃಪಾನಿಧಿ ಕಾಲೇಜು ಜಂಕ್ಷನ್
12. ಪ್ಯಾಲೆಸ್ ರಸ್ತೆ ಮತ್ತು ಎಂ.ವಿ.ಜಯರಾಮನ್ ರಸ್ತೆ ಜಂಕ್ಷನ್.