ಬೆಂಗಳೂರು: ರಾಜ್ಯ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳ ಆಧಾರ ಮೇರೆಗೆ ಬಿಬಿಎಂಪಿಯು ಮಾಸ್ಕ್ ಧರಿಸುವ ವಿಚಾರವಾಗಿ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಆದರೆ, ವಾಹನ ಸವಾರರಿಗೆ ಮಾಸ್ಕ್ ಕಡ್ಡಾಯದ ಬಗ್ಗೆ ಗೊಂದಲ ಉಂಟಾಗಿದ್ದರಿಂದ ಆಯುಕ್ತರಾದ ಮಂಜುನಾಥ್ ಪ್ರಸಾದ್ ಸರ್ಕಾರದ ಆರೋಗ್ಯ ಇಲಾಖೆಗೆ ಪತ್ರ ಬರೆದು ಸ್ಪಷ್ಟೀಕರಣ ಕೊಡುವಂತೆ ಕೇಳಿದ್ದಾರೆ.
ವಾಹನಗಳಲ್ಲಿ ಗಾಜುಗಳನ್ನು ಮುಚ್ಚಿಕೊಂಡು ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್ ಕಡ್ಡಾಯ ಹಾಗೂ ದ್ವಿಚಕ್ರ ವಾಹನ ಸವಾರರು ಒಬ್ಬರೇ ಇದ್ದಾಗಲೂ ಮಾಸ್ಕ್ ಕಡ್ಡಾಯ ಎಂದಿದ್ದ ಬಿಬಿಎಂಪಿ ನಿಯಮಕ್ಕೆ ವಿರೋಧ ವ್ಯಕ್ತವಾದ್ದರಿಂದ ಈ ವಿಷಯವಾಗಿ ಸ್ಪಷ್ಟೀಕರಣ ಕೇಳಿ ಆಯುಕ್ತರು ಪತ್ರ ಬರೆದಿದ್ದಾರೆ.
ಅಲ್ಲದೆ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ತಿನ್ನುವಾಗ, ಕುಡಿಯುವಾಗ, ಸಂಗೀತವಾದ್ಯ ನುಡಿಸುವಾಗ, ಮುಖ ಒದ್ದೆಯಾಗುವಂತಹ ಚಟುವಟಿಕೆ ವೇಳೆ (ಈಜುವುದು), ಹಲ್ಲು - ವೈದ್ಯಕೀಯ ತಪಾಸಣೆ ವೇಳೆ, ಕಾನೂನು ಪಾಲನೆಗೆ ಗುರುತು ಪತ್ತೆಗೆ ತಪಾಸಣೆ ನಡೆಸಬೇಕಾದಾಗ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಮಾಸ್ಕ್ ಧರಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆ.