ಬೆಂಗಳೂರು: ರ‍್ಯಾಪಿಡ್ ರಸ್ತೆ ವಿಮರ್ಶೆ ಮಾಡಿ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಮೂರು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆನಂತರ, ರ‍್ಯಾಪಿಡ್ ರಸ್ತೆ ನಿರ್ಮಾಣ ಕುರಿತು ತೀರ್ಮಾನ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ತುಷಾರ್ ಗಿರಿನಾಥ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಹಲವು ಭಾಗಗಳಲ್ಲಿ ಬಿರುಕು ಕಂಡಿರುವ ರ‍್ಯಾಪಿಡ್ ರಸ್ತೆ' ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಈ ಸಂಬಂಧ ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದವರು ಪರೀಕ್ಷೆ ನಡೆಸಲಿದ್ದಾರೆ ಎಂದರು. ಪಾಲಿಕೆ ಹಳೇ ಮದ್ರಾಸ್ ರಸ್ತೆಯಲ್ಲಿ 337.5 ಮೀಟರ್ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್' ತಂತ್ರಜ್ಞಾನದ ರ‍್ಯಾಪಿಡ್ ರಸ್ತೆಯನ್ನು ಪ್ರಾಯೋಗಿಕವಾಗಿ ನಿರ್ಮಿಸಿದೆ. ಈ ರಸ್ತೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಹೀಗಾಗಿ ಐಐಎಸ್‌ಸಿಯಿಂದ ವರದಿ ಪಡೆಯುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ವರದಿ ಬಂದ ಬಳಿಕ ನಿರ್ಧಾರ: ವರದಿ ಬಂದ ಬಳಿಕ ಯಾವ ಕಾರಣಕ್ಕೆ ರಸ್ತೆ ಬಿರುಕುಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಅದೇ ರೀತಿ, ಮರು ನಿರ್ಮಾಣದ ಖರ್ಚುಗಳನ್ನು ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಸ ಗುಡಿಸುವ ಯಂತ್ರಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿ: ಬೆಂಗಳೂರು ನಗರಕ್ಕೂ ಕಸ ಗುಡಿಸುವ ಯಂತ್ರಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿಯೇ ನಡೆಯಲಿದೆ. 15ನೇ ಹಣಕಾಸು ಆಯೋಗವೂ ಯಂತ್ರಗಳ ಖರೀದಿಗೆ ಹಸಿರು ನಿಶಾನೆ ತೋರಿದ್ದು, ಬಿಬಿಎಂಪಿ ಬಜೆಟ್ ಅನ್ವಯ ಹೆಚ್ಚಿನ ಸಂಖ್ಯೆಯಲ್ಲಿಯೇ ಯಂತ್ರಗಳನ್ನು ಖರೀದಿ ಮಾಡುತ್ತೇವೆ ಎಂದರು.
ಗಾಂಧಿಬಜಾರ್ ಸಂಬಂಧ ಕೆಲವರಿಗೆ ನೋಟಿಸ್: ಗಾಂಧಿಬಜಾರ್ ವಾಣಿಜ್ಯ ಚಟುವಟಿಕೆಗಳ ಸಂಬಂಧ ಕೆಲವರಿಗೆ ನೋಟಿಸ್ ನೀಡಿ ಮಾಹಿತಿ ಕೇಳಲಾಗಿದೆ. 2007ನೇ ನಿಯಮದ ಪ್ರಕಾರ, ಯಾವುದೇ ತಪ್ಪುಗಳು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಹೇಳಿದರು. ಹೊಸ ತಂತ್ರಜ್ಞಾನದ ನೆಪದಲ್ಲಿ ಕಳಪೆ ಕಾಮಗಾರಿ ಆಗಿದ್ಯಾ ಅನ್ನುವ ಶಂಕೆ ವ್ಯಕ್ತವಾಗಿದೆ.
ದೇಶದ ಪ್ರಥಮ ರಾಪಿಡ್ ರಸ್ತೆ ಅಂತ ಬಿಬಿಎಂಪಿ ಬಿಂಬಿಸಿತ್ತು ಕಳೆದ ವಾರ ರಸ್ತೆಯಲ್ಲಿ ಬಿರುಕುಬಿದ್ದಿತ್ತು. ರಸ್ತೆ ರೆಡಿಯಾಗಿದ್ದೂ ಬೇಗವಾದರೂ ಸಿಎಂ ಉದ್ಘಾಟನೆಗೆ ಒಂದಷ್ಟು ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನಾ ಭಾಗ್ಯ ಸಿಕ್ಕರೂ ಕಳಪೆ ಕಾಮಗಾರಿಯಿಂದ ಮತ್ತೆ ವಾಹನ ಸವಾರರು ಪರದಾಡುವಂತಾಗಿದೆ. 337.5 ಮೀಟರ್ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಪೇವ್‌ಮೆಂಟ್ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡಲಾಗಿತ್ತು.
ಪ್ರಾಯೋಗಿಕವಾಗಿ ನಿರ್ಮಿಸಲಾಗಿರುವ ಈ ರ‍್ಯಾಪಿಡ್ ರಸ್ತೆಯಲ್ಲಿ ಮೂರ್ನಾಲ್ಕು ಕಡೆ ಬಿರುಕು ಬಿದ್ದಿದೆ. ಪ್ರೀಕಾಸ್ಟ್ ಪ್ಯಾನೆಲ್ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್ ಮಿಶ್ರಣ ಇಲ್ಲದೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಕ್ಷಿಪ್ರವಾಗಿ ರಸ್ತೆ ನಿರ್ಮಾಣವಾಗಿದೆ ಎಂದು ಸಂತಸದಲ್ಲಿದ್ದ ನಾಗರಿಕರು ಕಳಪೆ ಕಾಮಗಾರಿ ಕಂಡು ನಿಗಿ ನಿಗಿ ಕೆಂಡಕಾರುತ್ತಿದ್ದಾರೆ.
ಇದನ್ನೂ ಓದಿ: ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಡುವಂತೆ ಫಿಲ್ಮ್ ಚೇಂಬರ್ನಿಂದ ಬಿಬಿಎಂಪಿಗೆ ಮನವಿ
ಇನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ಹಾಗೂ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆ: ಮಧ್ಯೆ ಭಾಗದಲ್ಲಿ ಏಕಾಏಕಿ ಬಾಯ್ತೆರೆದ ರಸ್ತೆ, ಗುಂಡಿಯಿಂದ ಬೈಕ್ ಸವಾರಿಗೆ ಗಾಯ