ಬೆಂಗಳೂರು: ಖಾಸಗಿ ಲ್ಯಾಬ್ಗಳ ಎಡವಟ್ಟಿನಿಂದ ನಗರದ ಎರಡು ಮೂರು ಪ್ರಕರಣಗಳಲ್ಲಿ ಮೊದಲು ಕೊರೊನಾ ಪಾಸಿಟಿವ್ ಬಂದು ನಂತರ ನೆಗೆಟಿವ್ ಬಂದಿವೆ. ಹೀಗಾಗಿ ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್ಗಳಿಗಷ್ಟೇ ಪರೀಕ್ಷೆಗೆ ನೀಡಬೇಕು. ಆಸ್ಪತ್ರೆಗಳೂ ಇವುಗಳನ್ನೇ ರೆಫರ್ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಐಸಿಎಂಆರ್ ಮಾನ್ಯತೆ ಪಡೆದ ಪ್ರಯೋಗಾಲಯಗಳು ಇಲ್ಲದಿದ್ರೆ ಟೆಸ್ಟ್ ರಿಸಲ್ಟ್ ಪರಿಗಣಿಸಲು ಸಾಧ್ಯವಿಲ್ಲ. ಖಾಸಗಿ ಲ್ಯಾಬ್ನಲ್ಲಿ ಕೊರೊನಾ ಪಾಸಿಟಿವ್ ಬಂದ್ರೆ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಸರ್ಕಾರಿ ಲ್ಯಾಬ್ಗೆ ಕಳಿಸಿಕೊಡುತ್ತೇವೆ. ಅಲ್ಲಿ ನೆಗೆಟಿವ್ ಬಂದ್ರೆ ನೆಗೆಟಿವ್ ಅಂತ ನಿರ್ಧಾರ ಮಾಡುತ್ತೇವೆ ಎಂದರು.
ಬಿಬಿಎಂಪಿ ಅಧಿಕಾರಿಯೊಬ್ಬರದ್ದು ಮೊದಲು ಪಾಸಿಟಿವ್ ಬಂತು, ಆಮೇಲೆ ನೆಗೆಟಿವ್ ಬಂತು. ಗರ್ಭಿಣಿ ಮಹಿಳೆ ಹಾಗೂ ಕೆಲವೊಂದು ಪ್ರಕರಣ ಹೀಗೆ ಬರುತ್ತಿದೆ. ಕೆಲವೊಂದು ಆಸ್ಪತ್ರೆಗಳು ಕೂಡಾ ಗಂಟಲು ದ್ರವ ಸಂಗ್ರಹಿಸಿ ಟೆಸ್ಟ್ ಮಾಡಲು ಕೆಲ ಖಾಸಗಿ ಲ್ಯಾಬ್ಗಳನ್ನು ರೆಫರ್ ಮಾಡುವ ಅಗತ್ಯವಿಲ್ಲ. ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್ಗಳಿಗೆ ಮಾತ್ರ ಕಳಿಸಲು ತಿಳಿಸಲಾಗಿದೆ ಎಂದರು.
ಲಾಕ್ಡೌನ್ ಇದ್ದಾಗ ಬೆಂಗಳೂರಿನಲ್ಲಿ ಕೊರೊನಾ ಹರಡದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೀಗ ಅಂತರ್ ರಾಜ್ಯ ಹಾಗೂ ವಿದೇಶದಿಂದ ಬರುವವರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇವರನ್ನೆಲ್ಲ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ಕೊರೊನಾ ಸಮುದಾಯಕ್ಕೆ ಹರಡಿಲ್ಲ ಎಂದರು. ಕಡ್ಡಾಯವಾಗಿ ಹೋಂ ಕ್ವಾರಂಟೈನಲ್ಲಿ ಇರುವಂತೆ ನೋಡಿಕೊಳ್ಳಲು ವಾರ್ಡ್ ಲೆವೆಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಟೀಂ, ಎನ್ಜಿಒ, ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.
ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ. ಜೂನ್ ಅಂತ್ಯದವರೆಗೆ ಹೆಚ್ಚು ಪ್ರಕರಣಗಳು ದಾಖಲಾಗಲು ಸಾಧ್ಯವಿಲ್ಲ. 400ರ ಗಡಿ ದಾಟುವುದಿಲ್ಲ. ಬಹಳ ಬೇಗ ಕೇಸ್ಗಳು ರಿಕವರಿ ಆಗುತ್ತಿವೆ. ಅರ್ಧಕ್ಕಿಂತಲೂ ಹೆಚ್ಚು ಜನ ಗುಣಮುಖರಾಗಿ ಹೋಗುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲು ಲ್ಯಾಬ್ ಸಂಖ್ಯೆ ಕಡಿಮೆಯಿದೆ. ಬೆಂಗಳೂರಲ್ಲಿ 28 ಲ್ಯಾಬ್ಗಳಿವೆ. ಹೀಗಾಗಿ ಅದಕ್ಕೆ ಮೊದಲು ಆದ್ಯತೆ ನೀಡಿ ಇಲ್ಲಿ ಟೆಸ್ಟ್ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನ ಕೊರೊನಾ ಕೇಸ್ಗಳ ರಿಸಲ್ಟ್ ಬರುವುದು ಎರಡು ಮೂರು ದಿನ ತಡವಾಗುತ್ತಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿದೆ ಎಂದರು.
ಸದ್ಯ ಬೇರೆ ಜಿಲ್ಲೆಯ ಸ್ಯಾಂಪಲ್ಸ್ ಬರುವುದು ಕಡಿಮೆಯಾಗಿರುವುದರಿಂದ ಬೆಂಗಳೂರಿನ ರಿಸಲ್ಟ್ 24 ಗಂಟೆಯೊಳಗೆ ಕೊಡುವುದಾಗಿ ತಿಳಿಸಿದ್ದಾರೆ ಎಂದರು. ನಗರಕ್ಕೆ ಬರುವ ಪ್ರಯಾಣಿಕರಿಗೆ ಅಗತ್ಯವಿದ್ದಲ್ಲಿ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಬಗ್ಗೆ ಖರ್ಚು ವೆಚ್ಚದ ಲೆಕ್ಕಾಚಾರ ಇನ್ನೂ ಮಾಡಿಲ್ಲ ಎಂದರು.