ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಇತ್ತೀಚೆಗೆ ನಡೆದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಕುರಿತು ಮಾಹಿತಿ ಬಹಿರಂಗಪಡಿಸುವುದು ಸರಿಯಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ವೈದ್ಯರು ಈ ಕುರಿತು ಗಾಯಾಳುಗಳ ಮಾಹಿತಿ ಬಹಿರಂಗಪಡಿಸುವುದು ಸೂಕ್ತವಲ್ಲ. ಇದರಿಂದ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದ್ದಾರೆ ಎಂದರು.
ನಮ್ಮ ಸಿಬ್ಬಂದಿ ಬೇಗ ಗುಣಮುಖರಾಗಿ ಹೊರಬರಬೇಕು. ಈ ಸಂಬಂಧ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರಿಗೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯ ಇದ್ದಲ್ಲಿ ಬಿಬಿಎಂಪಿ ಪೂರೈಕೆ ಮಾಡಲಿದ್ದು, ನಾವು ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿ, ಬೇಗ ಗುಣಮುಖರಾಗಬೇಕೆಂದು ಆಶಿಸುತ್ತಿದ್ದೇವೆ ಎಂದು ಹೇಳಿದರು.
ಸುಟ್ಟ ಗಾಯಗಳಾಗಿರುವುದರಿಂದ, ಗಾಯಗಳ ಸ್ವರೂಪ ವಿಭಿನ್ನವಾಗಿರುತ್ತದೆ. ಆಳವಾಗಿ ಗಾಯಗಳಾಗಿವೆ. ಗುಣಮುಖರಾಗಲು ಸಮಯ ಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತೀವ್ರ ಗಾಯಗೊಳಗಾದವರಿಗೆ ಚರ್ಮದ ಕಸಿ ಪ್ರಾರಂಭಿಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪಾಲಿಕೆ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ದುರುಂತದಲ್ಲಿ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಗುಣಮುಖರಾಗುವ ನಿರೀಕ್ಷೆ ಇದೆ. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ದಾಖಲಿಸಲು ನಾವು ಸಿದ್ಧವಾಗಿದ್ದೇವೆ. ಇದರ ಸಂಬಂಧ ಪ್ರತಿನಿತ್ಯ ವೈದ್ಯರ ಜತೆ ಸಂಪರ್ಕ ಮಾಡುತ್ತಿದ್ದೇವೆ. ಆರೋಗ್ಯದಲ್ಲಿ ಏನಾದರೂ ಏರುಪೇರು ಆದರೂ ಒಳ್ಳೆಯ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ರೋಗಿಗಳು ಹಾಗೂ ಅವರ ಸಂಬಂಧಿಕರು ಆತಂಕಗೊಳ್ಳುವ ಆಗತ್ಯವಿಲ್ಲ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಕೆಂಪೇಗೌಡ ಜಯಂತಿಗೆ ಸದ್ಯದಲ್ಲೇ ದಿನಾಂಕ ನಿಗದಿ: ನಾಡಪ್ರಭು ಕೆಂಪೇಗೌಡ ಜಯಂತಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿನಾಂಕ ನಿಗದಿಗೊಳಿಸುವಂತೆ ಪಾಲಿಕೆಗೆ ಸೂಚನೆ ಕೊಟ್ಟಿದ್ದಾರೆ. ಜಯಂತಿ ಆಚರಣೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನೈಜ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದು ಮುಗಿದ ಬಳಿಕ ಅಂತಿಮವಾಗಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಪ್ರಶಸ್ತಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಎಷ್ಟು ಜನರಿಗೆ ಪ್ರಶಸ್ತಿ ನೀಡಬೇಕು ಮತ್ತು ಪ್ರಶಸ್ತಿ ಮೊತ್ತ ಸೇರಿ ಇತ್ಯಾದಿ ಬಗ್ಗೆ ಸಮಿತಿಯು ತೀರ್ಮಾನಿಸಲಿದೆ ಎಂದು ಮಾಹಿತಿ ನೀಡಿದರು.
ಬೋರ್‌ವೆಲ್ ಕೊರೆಸುವ ಪ್ರಕ್ರಿಯೆ: ಕುಡಿಯುವ ನೀರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 110 ಹಳ್ಳಿಗಳು ಸೇರಿ ಪಾಲಿಕೆ ಎಲ್ಲ ವಲಯಗಳಿಗೆ ಬೋರ್‌ವೆಲ್‌ಗಳನ್ನು ಕೊರೆಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕೆಲ ವಲಯಗಳಲ್ಲಿ ಜಾಸ್ತಿ ಬೋರ್‌ವೆಲ್ ಕೊರೆಸಬೇಕಿದೆ. ಹೀಗಾಗಿ ಬೋರ್‌ವೆಲ್ ಕೊರೆಸುವ ಪ್ರಕ್ರಿಯೆ ಸದ್ಯದಲ್ಲೇ ಶುರುವಾಗಲಿದೆ ಎಂದರು.
ಇದನ್ನೂ ಓದಿ : ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ