ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಸ್ಪತ್ರೆ ಕಟ್ಟಡಗಳ ಕಾಮಗಾರಿ ಪ್ರಗತಿ ಪರಿಶೀಲನೆಯನ್ನು ಮುಖ್ಯ ಆಯುಕ್ತ ಗೌರವ್ ಗುಪ್ತ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಡೆಸಿದರು. ಈ ವೇಳೆ ಪಶ್ಚಿಮ ವಲಯ ಜಂಟಿ ಆಯುಕ್ತರು ಶಿವಸ್ವಾಮಿ, ವಲಯ ಮುಖ್ಯ ಇಂಜಿನಿಯರ್ ದೊಡ್ಡಯ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಡಯಾಲಿಸಿಸ್ ಸೆಂಟರ್ ಪರಿಶೀಲನೆ: ನಗರದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಮಾರುತಿಮಂದಿರ ವಾರ್ಡ್ ವ್ಯಾಪ್ತಿಯಲ್ಲಿ ಬಿಬಿಎಂಪಿ ಅನುದಾನದಡಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದ್ದು, ಉದ್ಘಾಟಿಸಿಲು ಸಿದ್ದವಾಗಿದೆ. ಕೋವಿಡ್ ಇರುವ ಪರಿಣಾಮ ಸದರಿ ಡಯಾಲಿಸಿಸ್ ಕೇಂದ್ರದಲ್ಲಿ 15 ಐಸಿಯು ಹಾಸಿಗೆ ಹಾಗೂ 50 ಹೆಚ್‌ಡಿಯು ಹಾಸಿಗೆ ಸೇರಿದಂತೆ 65 ಹಾಸಿಗೆ ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದರು.
ಪಂತರಪಾಳ್ಯ ಆಸ್ಪತ್ರೆ ಕಾಮಗಾರಿ ಸ್ಥಳ ಪರಿಶೀಲನೆ: ನಗರದ ಪಂತರಪಾಳ್ಯದಲ್ಲಿ 2.50 ಎಕರೆ ಪ್ರದೇಶದಲ್ಲಿ ಬಿಬಿಎಂಪಿ ಅನುದಾನದಡಿ 18 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ. ಈ ಸಂಬಂಧ ಮುಖ್ಯ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ ಶಂಕುಸ್ಥಾಪನೆ ಮಾಡಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
200 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲನೆ: ನಗರದ ಅಗ್ರಹಾರ ದಾಸರಹಳ್ಳಿ ವಾರ್ಡ್ ಎಂ.ಸಿ.ಲೇಔಟ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ ಅಡಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ತಳ ಮಹಡಿ, ನೆಲಮಹಡಿ ಅಲ್ಲದೆ ಮೂರು ಅಂತಸ್ತಿನ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. ಕಟ್ಟಡದ ಕಾಮಗಾರಿಯು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮುಗಿಯಲಿದೆ ಎಂದು ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು. ಈ ವೇಳೆ ಮಾನ್ಯ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಸದರಿ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಸೂಚಿಸಿದರು.