ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ ವಿಧಾನ ಪರಿಷತ್ ನಲ್ಲಿ ಅನುಮೋದನೆ ಪಡೆಯಿತು. ಕಾನೂನು ಸಚಿವ ಮಾಧುಸ್ವಾಮಿ ಪ್ರಸ್ತಾವ ಮಂಡಿಸಿ ವಿವರಣೆ ನೀಡಿದರು.
ನಗರದಲ್ಲಿ 198 ವಾರ್ಡ್ ಇತ್ತು. ಅದನ್ನು 248 ವಾರ್ಡ್ಗೆ ಸೀಮಿತಗೊಳಿಸಲು ನಿರ್ಧರಿಸಿದ್ದೇವೆ. ನಗರಪಾಲಿಕೆ ಸದಸ್ಯರಾದವರು ಬೇರೆ ಸಮಾನವಾದ ಸಂಘ ಸಂಸ್ಥೆಗೆ ಆಯ್ಕೆಯಾದವರು ತಮ್ಮ ಹಳೆಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಾಸಕರ ಪಾಲ್ಗೊಳ್ಳುವಿಕೆ, ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ, ಜೋನಲ್ ಸಮಿತಿ ಮಾಡುತ್ತಿದ್ದೇವೆ. ತೆರಿಗೆ, ಅಧಿಕಾರಿ ನೇಮಕ, ಜಾಹೀರಾತು, ಆದಾಯ ತರಲು ಅಧಿಕಾರ, ಮನರಂಜನಾ ತೆರಿಗೆ ಸಂಗ್ರಹ, 60 x 40 ನಿವೇಶನದಲ್ಲಿ ಮನೆ ಕಟ್ಟುವವರಿಗೆ ಮಳೆ ಕೊಯ್ಲು ಕಡ್ಡಾಯ. ಮೇಯರ್- ಉಪ ಮೇಯರ್ ಕಾಲಾವಧಿ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ವಿಸ್ತರಣೆ ಮಾಡುವುದೂ ಸೇರಿದಂತೆ ಮತ್ತಿತರ ಬದಲಾವಣೆ ತರಲಿದ್ದೇವೆ ಎಂದರು.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಅನುದಾನ ಸಂಗ್ರಹ ಆದರೆ ಸಾಕಷ್ಟು ಅಭಿವೃದ್ಧಿ ಸಾಧ್ಯ. ಮೇಯರ್ ಅವಧಿ 30 ತಿಂಗಳು ಬದಲು 5 ವರ್ಷ ಮಾಡಿ. ಇಲ್ಲವಾದರೆ ಹಳೆ ಕಾರ್ಪೊರೇಷನ್, ಹೊಸ ಕಾರ್ಪೊರೇಷನ್ ಮಾಡಿ ಎಂದು ಸಲಹೆ ನೀಡಿದರು. ಸಮಿತಿಯಲ್ಲಿ ಇಲ್ಲದ ಸದಸ್ಯರು ಯಾವುದೇ ಸಲಹೆ ನೀಡುವಂತಿಲ್ಲ ಎಂಬ ವಿಚಾರವಾಗಿ ಸದನದಲ್ಲಿ ಒಂದಿಷ್ಟು ಗದ್ದಲ ನಡೆಯಿತು. ಸಮಿತಿ ಸದಸ್ಯರಲ್ಲದ ನಾರಾಯಣ ಸ್ವಾಮಿ ಮಾತಿಗೆ ಮುಂದಾದಾಗ ಸಚಿವ ಮಾಧುಸ್ವಾಮಿ ಅಡ್ಡಿ ವ್ಯಕ್ತಪಡಿಸಿದರು. ನಾರಾಯಣ ಸ್ವಾಮಿ ಮಾತು ನಿಲ್ಲಿಸಿದರು. ಅವರ ಸಲಹೆಗೆ ಅವಕಾಶ ಸಿಗಲಿಲ್ಲ. ಸದಸ್ಯರಾದ ರಮೇಶ್ ಗೌಡ, ಬಸವರಾಜ್ ಇಟಗಿ, ಸಿ ಎಂ ಇಬ್ರಾಹಿಂ ಮತ್ತಿತರ ಸದಸ್ಯರು ಮಾತನಾಡಿದರು.
ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ
ಕರ್ನಾಟಕ ಸ್ಟ್ಯಾಂಪ್ 2ನೇ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಆರ್. ಅಶೋಕ್ ಮಂಡಿಸಿ ವಿವರಣೆ ನೀಡಿ, ಫ್ಲ್ಯಾಟ್ ಗಳ ಮೇಲಿನ ತೆರಿಗೆ ಕಡಿಮೆ ಮಾಡುವ ತಿದ್ದುಪಡಿ ಇದು ಒಳಗೊಂಡಿದೆ. ಸದ್ಯ 20 ಲಕ್ಷ ಒಳಗಿನ ಸ್ಟ್ಯಾಂಪ್ ಡ್ಯೂಟಿ ಶೇ.2 ರಷ್ಟು, 20 ರಿಂದ 35 ಲಕ್ಷ ರೂ ಮೊತ್ತದ ಪ್ಲ್ಯಾಟ್ ಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಶೇ.3 ರಷ್ಟು, 20 ರಿಂದ 50 ಲಕ್ಷ ರೂ ಮೊತ್ತದ ಪ್ಲ್ಯಾಟ್ ಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಶೇ.5 ರಷ್ಟು ಕಡಿಮೆ ಆಗಲಿದೆ ಎಂದರು.
ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, 20 ಲಕ್ಷ ರೂ. ಮೊತ್ತದ ಮನೆ ಬೆಂಗಳೂರಿನಲ್ಲಿ ಎಲ್ಲೂ ಸಿಗಲ್ಲ. ಕಾಯ್ದೆ ತರುವ ಉದ್ದೇಶ ಈಡೇರಬೇಕಲ್ಲವಾ? 2, 3ನೇ ದರ್ಜೆಯ ನಗರದಲ್ಲೂ ಇಂತಹ ಬೆಲೆ ಇಲ್ಲ. ಹೀಗಾಗಿ ಕಾಯ್ದೆ ತಂದು ಪ್ರಯೋಜನ ಆಗದು. ಇನ್ನಷ್ಟು ಬದಲಾವಣೆ ಅವಶ್ಯಕ ಎಂದು ವಿವರಿಸಿದರು.ಇದಕ್ಕೆ ಉತ್ತರಿಸಿದ ಸಚಿವ ಆರ್. ಅಶೋಕ್, ಬಡವರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಮಾಡಿದ್ದೇವೆ. ಸಣ್ಣ ಪಟ್ಟಣದಲ್ಲಿ ಈ ಬೆಲೆಗೆ ಮನೆ ಸಿಗಲಿದೆ. ಸಿಎಂ ಜತೆ ಈ ವಿಚಾರವಾಗಿ ಸಾಕಷ್ಟು ಚರ್ಚಿಸಿದ್ದೇವೆ. 45 ಲಕ್ಷದಿಂದ ಆರಂಭಿಸಲು ಮನವಿ ಮಾಡಿದೆವು. ಆದರೆ ಒಪ್ಪಿಗೆ ಸಿಕ್ಕಿಲ್ಲ. ಆದರೆ ಮುಂದಿನ ಸಭೆಯಲ್ಲಿ ಇನ್ನೊಮ್ಮೆ ಚರ್ಚಿಸುತ್ತೇನೆ. ಇದು ಒಂದು ಬೆಡ್ ರೂಂ ಮನೆಯ ವ್ಯಾಪ್ತಿಗೆ ಅನ್ವಯಿಸುತ್ತದೆ ಎಂದು ವಿವರಣೆ ನೀಡಿದರು.
ಸದಸ್ಯರಾದ ಅಪ್ಪಾಜಿಗೌಡ, ಪುಟ್ಟಣ್ಣ ಮತ್ತಿತರರು ತಮ್ಮ ಸಲಹೆ ನೀಡಿದರು. ಸಚಿವ ಆರ್. ಅಶೋಕ್ ಎಲ್ಲರ ಜತೆ ಇನ್ನೊಮ್ಮೆ ಈ ವಿಚಾರವಾಗಿ ಸಮಗ್ರ ಚರ್ಚೆ ನಡೆಸುವ ಭರವಸೆ ಇಟ್ಟರು. ಹೆಚ್ಚು ಚರ್ಚೆಯಾಗದೇ ವಿಧೇಯಕ ಅನುಮೋದನೆ ಪಡೆಯಿತು.