ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ರ್ಯಾಂಕಿಂಗ್ ದೊರೆಯಲು ಜನರ ಸಹಕಾರವೂ ಅತ್ಯಂತ ಮುಖ್ಯವಾಗಿದೆ. ಜನರು ಉತ್ತಮ ಫೀಡ್ ಬ್ಯಾಕ್ ನೀಡುವುದರ ಮೂಲಕ ಅಭಿಯಾನದಲ್ಲಿ ಪಾಳ್ಗೊಳ್ಳಬೇಕೆಂದು ಬಿಬಿಎಂಪಿ ಕರೆ ನೀಡಿದೆ.
ಇಂದು ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿ ನಡೆದ ಸ್ವಚ್ಛತಾ ಆಂದೋಲನಕ್ಕೆ ವಿಶೇಷ ಆಯುಕ್ತ ಡಿ.ರಂದೀಪ್ ಚಾಲನೆ ನೀಡಿ ಬಳಿಕ ಮಾತನಾಡಿ, ಬೆಂಗಳೂರು ನಗರವನ್ನು ಸ್ವಚ್ಛತೆಯ ನಕ್ಷೆಯಲ್ಲಿ ಉತ್ತಮ ಸ್ಥಾನಕ್ಕೆ ತರಲು ಬಿಬಿಎಂಪಿ ಹಾಗೂ ನಾಗರಿಕರು ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಎರಡು ಮೂರು ವರ್ಷದಲ್ಲಿ ನಗರಕ್ಕೆ ಬರುತ್ತಿರುವ ರ್ಯಾಂಕ್ ಸಮಧಾನಕರವಾಗಿಲ್ಲ. ಕಳೆದ ವರ್ಷ 214ನೇ ರ್ಯಾಂಕ್ ಬಂದಿದ್ದು, ಒಂದು ವರ್ಷದಿಂದೀಚೆಗೆ ಹಲವಾರು ಸುಧಾರಣೆಯಾಗಿದೆ. ಕಸ ಸಂಗ್ರಹಣೆ ಹಾಗೂ ವಿಂಗಡಣೆ ಪ್ರಮಾಣ ಹೆಚ್ಚಾಗಿದ್ದು, ಶೇ. 40ರಷ್ಟು ವಿಂಗಡಣೆಯಾಗುತ್ತಿದೆ. ಸಾರ್ವಜನಿಕ ಶೌಚಾಲಯ ಬಳಕೆ ಬಗ್ಗೆಯೂ ಜನರ ಅರಿವು ಹೆಚ್ಚಾಗಿದೆ ಎಂದರು.
ಇನ್ನು ಪಾಲಿಕೆಯ 18 ಸಾವಿರ ಪೌರಕಾರ್ಮಿಕರು, ಎಂಟು ಸಾವಿರ ಚಾಲಕರು ಹಾಗೂ ಸಹಾಯಕರು, ಪ್ರತಿನಿತ್ಯ 6-30ರಿಂದ 1-30 ಗಂಟೆವರೆಗೆ ಕೆಲಸ ನಿರ್ವಹಿಸುತ್ತಾರೆ. ಕಸವನ್ನು ಕಡಿಮೆ ಮಾಡುವ ಬಗ್ಗೆ ಎಲ್ಲರೂ ಗಮನ ಕೊಡಬೇಕು. ಬೇರೆ ಬೇರೆ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಛ ಸರ್ವೇಕ್ಷಣಾ ಬಗ್ಗೆ ಪ್ರಚಾರ ಆಗುತ್ತಿದೆ. ಸಿಟಿಜನ್ ಫೀಡ್ ಬ್ಯಾಕ್ ಎಂಬ ಲಿಂಕ್ಗೆ ಹೋಗಿ ಅಲ್ಲಿರುವ ಹತ್ತು ಪ್ರಶ್ನೆಗಳಿಗೆ ಸಾರ್ವಜನಿಕರು ಪಾಲಿಕೆ ಬಗ್ಗೆ ಉತ್ತಮ ಫೀಡ್ ಬ್ಯಾಕ್ ನೀಡಿದರೆ ಪಾಲಿಕೆಯ ರ್ಯಾಂಕಿಂಗ್ ಹೆಚ್ಚಾಗಲಿದೆ. ಫೆ. 15ರಿಂದ ಏಪ್ರಿಲ್ ಒಳಗಾಗಿ ಕೇಂದ್ರದಿಂದ ಅಬ್ಸರ್ವರ್ಸ್ ತಂಡ ಇಲ್ಲಿಗೆ ಆಗಮಿಸಿ ನಗರವನ್ನು ವೀಕ್ಷಣೆ ಮಾಡಲಿದೆ ಎಂದು ತಿಳಿಸಿದರು.
ಎಲ್ಲಾ ನಾಗರಿಕರು ಸಹ ಕಸವನ್ನು ನಿಮ್ಮ ಮನೆ ಬಳಿ ಬರುವ ವಾಹನಗಳಿಗೇ ಕೊಡಬೇಕು. ನ್ಯೂನತೆಗಳಿದ್ದರೆ ಕಂಟ್ರೋಲ್ ರೂಂಗೆ ವರದಿ ಮಾಡಿ. ಮುಂಬರುವ ದಿನಗಳಲ್ಲಿ ಪಾಲಿಕೆ ಸಿಟಿಜನ್ ವಾಲಂಟಿಯರ್ ಎಂದು ಪ್ರತೀ ವಾರ್ಡ್ ಹಾಗೂ ಪ್ರತೀ ಬ್ಲಾಕ್ನಿಂದ ಒಬ್ಬರನ್ನು ಆಯ್ಕೆ ಮಾಡಿ, ಫೀಡ್ ಬ್ಯಾಕ್ ಪಡೆಯಲಾಗುವುದು. ವಾರ್ಡ್ ಕಮಿಟಿಗಳಲ್ಲೂ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ ಎಂದು ಇದೇ ವೇಳೆ ಹೇಳಿದರು.