ಬೆಂಗಳೂರು: ಬಿಬಿಎಂಪಿಯ 14ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ 19-20ನೇ ಸಾಲಿನಲ್ಲಿ 95 ಕೋಟಿ ರೂ. ಉಳಿತಾಯವಾಗಿದೆ. ಇದನ್ನು ಬಳಸಿಕೊಳ್ಳಲು ಆಡಳಿತ ಪಕ್ಷ ಕಾನೂನುಬಾಹಿರ ಕ್ರಮ ತೆಗೆದುಕೊಂಡಿದೆ. ಕೂಡಲೇ ಈ ಅನುದಾನದ ಕಾಮಗಾರಿಗಳ ಜಾಬ್ ಕೋಡ್ ರದ್ದು ಮಾಡಿ, ಪುನರ್ ಪರಿಶೀಲಿಸಬೇಕೆಂದು ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
![BBMP 14th Finance Commission money used in Illegal way: Abdul Wajid](https://etvbharatimages.akamaized.net/etvbharat/prod-images/kn-bng-06-bbmp-14thfinance-7202707_24082020233044_2408f_1598292044_190.jpg)
ಸರ್ಕಾರದ ಅನುದಾನವನ್ನು ಬಳಸಿಕೊಳ್ಳಬೇಕಾಗಿರುವುದರಿಂದ 14ನೇ ಹಣಕಾಸು ಆಯೋಗದ ಉಳಿಕೆ ಅನುದಾನವನ್ನು ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಕೌನ್ಸಿಲ್ ಹಾಗೂ ಸರ್ಕಾರ ಅನುಮೋದನೆ ನಿರೀಕ್ಷಿಸಿ ಮರು ಹಂಚಿಕೆ ಮಾಡಲಾಗಿದೆ. ಜಾಬ್ ಸಂಖ್ಯೆ ನೀಡಿರುವುದನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮುಂದೆ ಟಿಪ್ಪಣಿ ಮಂಡಿಸಲಾಗಿದೆ. ಆದರೆ, ಸಮಿತಿ ನಿರ್ಣಯ ಕೈಗೊಳ್ಳುವ ಮೊದಲೇ ಕೌನ್ಸಿಲ್ ಸಭೆಯಲ್ಲಿ ಸ್ವ-ನಿರ್ಣಯ ತೆಗೆದುಕೊಳ್ಳಲಾಗಿದ್ದು, ಸಮಿತಿಯ ಅಧಿಕಾರ ಮೊಟಕುಗೊಳಿಸಿದಂತಾಗಿದೆ.
![BBMP 14th Finance Commission money used in Illegal way: Abdul Wajid](https://etvbharatimages.akamaized.net/etvbharat/prod-images/kn-bng-06-bbmp-14thfinance-7202707_24082020233044_2408f_1598292044_190.jpg)
ಇದಕ್ಕೆ ಸಂಬಂಧಿಸಿದ ಕಡತಗಳನ್ನು ಪುನಃ ಪರಿಶೀಲಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮುಂದಾಗಿದ್ದು, ಹೀಗಾಗಿ, ಬಾಕಿ ಅನುದಾನಕ್ಕೆ ಸಂಬಂಧಿಸಿದ ಅನುದಾನ ಬಳಕೆ ಸಂಬಂಧ ಜಾಬ್‍ಕೋಡ್ ನೀಡುವುದು ಹಾಗೂ ಕಾರ್ಯಾದೇಶಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನುದಾನ ಹಂಚಿಕೆ:
- ಮೇಯರ್ ಗೌತಮ್ ಕುಮಾರ್ ವಾರ್ಡ್-39.89 ಕೋಟಿ ರೂ.
- ಶೆಟ್ಟಿಹಳ್ಳಿ ವಾರ್ಡ್ -2 ಕೋಟಿ ರೂ.
- ಆಡಳಿತ ಪಕ್ಷದ ನಾಯಕರ (ಜಕ್ಕೂರು) ವಾರ್ಡ್-10ಕೋಟಿ ರೂ.
- ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ (ಸಚಿವ ಆರ್.ಅಶೋಕ್)-1.50 ಕೋಟಿ ರೂ.
- ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರಸ್ತಾವನೆ-42.15 ಕೋಟಿ ರೂ.
- ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರಸ್ತಾವನೆ-1.2 ಕೋಟಿ ರೂ.
- ಬಿಬಿಎಂಪಿ ಆಯುಕ್ತರಿಂದ ಅನುಮೋದಿಸಲ್ಪಡುವ ಕಡತ-4 ಕೋಟಿ ರೂ.
- ಒಟ್ಟು-95.54 ಕೋಟಿ ರೂ.
ಹೀಗೆ ಒಟ್ಟು 95.54 ಕೋಟಿ ರೂಪಾಯಿ ಮರುಹಂಚಿಕೆ ಮಾಡಿರುವುದು ಕಾನೂನುಬಾಹಿರ ಎಂದು ವಾಜಿದ್ ದೂರಿದ್ದಾರೆ.