ಬೆಂಗಳೂರು: ಸಿಎಂ ಯಡಿಯೂರಪ್ಪ ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಬಿಎಸ್‌ವೈ ಸರ್ವಪಕ್ಷ ಸದಸ್ಯರ ಸಭೆ ಕರೆಯಬೇಕು. ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕೊಂಡೊಯ್ಯಬೇಕು. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ಅಲ್ಲಿ ಚರ್ಚಿಸಿ ನಂತರ ಕೇಂದ್ರದಿಂದ ಹಣ ತರುವ ಕಾರ್ಯ ಮಾಡಬೇಕು. ಇಲ್ಲವಾದರೆ ರಾಜ್ಯಕ್ಕೆ ಸಿಗಬೇಕಾದ 20 ಕೋಟಿ ಮೊತ್ತದ ಹಣದಲ್ಲಿ ಕೇಂದ್ರದಿಂದ ಕಡಿತ ಆಗಲಿದೆ ಎಂದ್ರು.
ತೆರಿಗೆ ಸಂಗ್ರಹದಲ್ಲಿ ಸಾಧನೆ: ಹಣ ತರಲು ಬಿಎಸ್‌ವೈ ಮನಸ್ಸು ಮಾಡಬೇಕೆಂದು ಒತ್ತಾಯಿಸಿದರು. ತೆರಿಗೆ ಸಂಗ್ರಹದಲ್ಲಿ ನಮ್ಮದು ಉತ್ತಮ ರಾಜ್ಯ. ಆದರೆ, ಹಣಕಾಸು ಆಯೋಗ, ನೀವು ಚೆನ್ನಾಗಿದ್ದೀರಿ, ನಿಮಗೇಕೆ ಹಣ ಅಂತಾ ಅನುದಾನ ಕಡಿತಗೊಳಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಕೇವಲ ರಾಜಕೀಯ ಮಾಡಿಕೊಂಡು ಇರುವುದಕ್ಕೆ ಸೀಮಿತವಾಗಿದೆ. ಕೇಂದ್ರ ಸರ್ಕಾರದ ಪಾಲು ಇನ್ನೂ ಶೇ. 3.6 ರಷ್ಟು ಹಣ ಬರಲಿದೆ. ಇದರಿಂದ 12 ಕೋಟಿ ಹಣದ ಕೊರತೆ ಆಗಲಿದೆ. ಒಂದೊಮ್ಮೆ ಇದನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ, ಬರುವ ಹಣ ನಿಲ್ಲಲಿದೆ.
ಉತ್ತರಪ್ರದೇಶ, ಗುಜರಾತ್, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಗೆ ಸಾಕಷ್ಟು ಅನುದಾನ ಸಿಗುತ್ತಿದೆ. ದೊಡ್ಡ ಕೊರತೆ ಎದುರಾಗಿರುವುದು ಕರ್ನಾಟಕಕ್ಕೆ ಎಂದು ಹೇಳಿದರು. 15ನೇ ಹಣಕಾಸು ಆಯೋಗ ಆರ್ಥಿಕ ಪರಿಸ್ಥಿತಿ ವರದಿ ಸಲ್ಲಿಸಿದೆ. ಈ ವರದಿಯನ್ನ ನೋಡಿದರೆ ಸಾಕಷ್ಟು ಆತಂಕವಾಗುತ್ತಿದೆ. 70 ವರ್ಷದಲ್ಲೇ ಮೊದಲ ಆತಂಕದ ವರದಿ ಇದಾಗಿದೆ. ವರದಿಯನ್ನ ಗಮನಿಸಿದರೆ ಆರ್ಥಿಕ ಹೊಡೆತ ತಪ್ಪಿದ್ದಲ್ಲ. ವರದಿಯನ್ವಯ ರಾಜ್ಯ 1 ಲಕ್ಷ ಕೋಟಿಯನ್ನ ಕಳೆದುಕೊಳ್ಳಬೇಕಾಗುತ್ತದೆ.
ದಕ್ಷಿಣದ ರಾಜ್ಯಗಳಿಗೆ ಇದರಿಂದ ಹೆಚ್ಚಿನ ಹೊಡೆತ ಬೀಳಲಿದೆ ಎಂದರು. ಇಡೀ ದೇಶದಲ್ಲಿಯೇ ನಮ್ಮದು ಉತ್ತಮ ಆರ್ಥಿಕ ನೀತಿ ಇದೆ. ಧರಂಸಿಂಗ್ ಅವಧಿಯಿಂದ ಆರ್ಥಿಕ ನೀತಿ ಉತ್ತಮವಾಗಿದೆ. ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ಮಾತ್ರ ಕುಸಿತವಾಗಿತ್ತು. ಆರ್ಥಿಕ ಶಿಸ್ತನ್ನ ಮುರಿದಿದ್ದರು. ಆರ್ಥಿಕ ವರದಿಯಂತೆ ರಾಜ್ಯಕ್ಕೆ ಅನುದಾನದ ಕೊರತೆಯಾಗಲಿದೆ. ಕೇಂದ್ರದಿಂದ ಬರುವ ಅನುದಾನದಲ್ಲಿ ಕೊರತೆಯಾಗಲಿದೆ ಎಂದರು. ನೀವು ಚೆನ್ನಾಗಿದ್ದೀರಾ, ನಿಮಗೆ ಅನುದಾನ ಯಾಕೆ ಅನ್ನೋ ರೀತಿ ಕೇಂದ್ರದ ಧೋರಣೆ ಇದೆ ಎಂದರು.
ಹೆಚ್ಚಿನ ಶೇರು ಯುಪಿಗೆ ಹೋಗ್ತಿದೆ: ಜಿಎಸ್ಟಿ ಸಂಗ್ರಹ ಮಾಡಿದ ಅನುದಾನದ ಹೆಚ್ಚಿನ ಶೇರು ಯುಪಿಗೆ ಹೋಗ್ತಿದೆ. ಹೆಚ್ಚಿನ ಜಿಎಸ್ಟಿ ಅನುದಾನ ಕೇಂದ್ರ ಯುಪಿಗೆ ನೀಡುತ್ತಿದೆ. ಶೇ. 17.36ರಷ್ಟು ಯುಪಿಗೆ ಹೋಗ್ತಿದೆ. ಗುಜರಾತ್ಗೆ ಶೇ 3.39ರಷ್ಟು ಹಂಚಿಕೆಯಾಗುತ್ತಿದೆ. ನಮ್ಮ ಕರ್ನಾಟಕಕ್ಕೆ ಶೇ. 3.06 ಮಾತ್ರ ಸಿಗುತ್ತಿದೆ. ಆದರೆ, ಜಿಎಸ್ಟಿ ಹೆಚ್ಚಿನ ತೆರಿಗೆ ರಾಜ್ಯದಿಂದ ಹೋಗುತ್ತಿದೆ. ಕೇಂದ್ರದಿಂದ ಸಿಗುವುದು ಅತ್ಯಲ್ಪ ಮಾತ್ರ ಎಂದು ಕೇಂದ್ರದ ನೀತಿಗೆ ಮಾಜಿ ಸಚಿವ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.