ಬೆಂಗಳೂರು : ಲೈಟರ್ ವಾಪಸ್ ಕೊಡಲ್ಲ ಅಂದಿದ್ದಕ್ಕೆ ಲಾಂಗ್ ಬೀಸಿದ್ದ ಆರೋಪಿಯನ್ನು ಬಸವೇಶ್ವರನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಾದೇವ ಸ್ವಾಮಿ ಎಂದು ಗುರುತಿಸಲಾಗಿದೆ.
ಜೂನ್ 5ರಂದು ರಾತ್ರಿ ಬಸವೇಶ್ವರನಗರದ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕುಳಿತು ಕುಡಿಯುತ್ತಿದ್ದ ಆರೋಪಿಯಿಂದ ಜನಾರ್ಧನ ಎಂಬಾತ ಸಿಗರೇಟ್ ಲೈಟರ್ ಪಡೆದಿದ್ದ. ಆದರೆ, ಎಣ್ಣೆ ನಶೆಯಲ್ಲಿದ್ದ ಜನಾರ್ಧನ 'ಲೈಟರ್ ವಾಪಸ್ ಕೊಡಲ್ಲ' ಎಂದಾಗ, ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಇಬ್ಬರ ನಡುವೆ ಗಲಾಟೆಯಾಗುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಅಂಗಡಿಯವರು, 'ಲೈಟರ್ ವಿಚಾರಕ್ಕೆ ಯಾಕೆ ಗಲಾಟೆ ಮಾಡಿಕೊಳ್ತಿದ್ದೀರಿ' ಎಂದು ಬೈದು ಬುದ್ಧಿವಾದ ಹೇಳಿ ಕಳುಹಿಸಿದ್ದರು.
ಆದರೆ, ಸ್ವಲ್ಪ ಸಮಯದಲ್ಲೇ ಮಾರಕಾಸ್ತ್ರದ ಸಮೇತ ವಾಪಸಾಗಿದ್ದ ಮಹಾದೇವ, ಬಾರ್ ಒಳಗೆ ನುಗ್ಗಿ ಜನಾರ್ಧನ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿದ್ದ. ಪರಿಣಾಮ ಜನಾರ್ಧನ್ ತಲೆಗೆ ಗಂಭೀರ ಗಾಯಗಳಾಗಿತ್ತು.
ಈ ಬಗ್ಗೆ ಜನಾರ್ಧನ್ ಜೊತೆಗಿದ್ದ ಸ್ನೇಹಿತ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಠಾಣಾ ಪೊಲೀಸರು, ಆರೋಪಿ ಮಹಾದೇವನನ್ನು ಬಂಧಿಸಿದ್ದಾರೆ.
ಓದಿ : ಶಾರ್ಪ್ ಶೂಟರ್ ಸಂತೋಷ್ ಜಾಧವ್ ಗ್ಯಾಂಗ್ನ 7 ಸದಸ್ಯರ ಬಂಧನ, 13 ಪಿಸ್ತೂಲ್ ವಶಕ್ಕೆ