ಬೆಂಗಳೂರು: ನಮ್ಮ ಸ್ಟ್ಯಾಂಡ್ ಒಂದೇ. ನಮಗೆ ಸಂಪೂರ್ಣ ಬಹುಮತ ಸಿಗಲಿದೆ. ನಾವು ಮ್ಯಾಜಿಕ್ ನಂಬರ್ ತಲುಪುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಸಂದರ್ಭ ನಿರ್ಮಾಣವಾಗಲ್ಲ. ಹೈಕಮಾಂಡ್ ನಾಯಕರಿಗೆ ನಾನೇ ಫೋನ್ ಮಾಡಿ ಇಲ್ಲಿನ ವಾಸ್ತುಸ್ಥಿತಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ನಲ್ಲಿ ಏನೇ ಸಮೀಕ್ಷೆ ಬರಲಿ. ಆದರೆ ನಮಗೆ ಗೆಲ್ಲುವ ವಿಶ್ವಾಸ ಇದೆ. ನಾವು ಬಹುಮತದ ಗಡಿ ದಾಟುತ್ತೇವೆ. ನಾನೇ ವರಿಷ್ಠರಿಗೆ ಕರೆ ಮಾಡಿ ಇಲ್ಲಿನ ವಸ್ತುಸ್ಥಿತಿ ತಿಳಿಸಿದ್ದೇನೆ. ಹೈಕಮಾಂಡ್ ನಾಯಕರು ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದಾರೆ ಎಂದರು.
ನಾನು ಮೊದಲಿಂದಲೂ ಒಂದೇ ಮಾತು ಹೇಳ್ತಾ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ಎಲ್ಲ ಕ್ಷೇತ್ರ, ಬೂತ್ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ. ನಮಗೆ ವಿಶ್ವಾಸ ಇದೆ, ಮ್ಯಾಜಿಕ್ ನಂಬರ್ ಮುಟ್ಟುತ್ತೇವೆ ಎಂಬ ಆತ್ಮವಿಶ್ವಾಸದ ಮಾತನಾಡಿದರು. ಕಾಂಗ್ರೆಸ್ನವರಿಗೆ ಬಹುಮತ ಬರಲ್ಲ, ಹಾಗಾಗಿ ಬೇರೆ ಪಕ್ಷದವರ ಜೊತೆ ಮಾತಾಡೋ ಪ್ರಯತ್ನ ಮಾಡುತ್ತಿದ್ದಾರೆ.
ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂತಾಯ್ತು, ಮೈತ್ರಿ ಸಂದರ್ಭ ಬರಲ್ಲ ಈಗ ನಮ್ಮ ಮುಂದೆ ಆ ಪ್ರಶ್ನೆ ಇಲ್ಲ, ನಾವು ಬಹುಮತ ದಾಟುತ್ತೇವೆ. ಕಾಂಗ್ರೆಸ್‌ನವರು ಏನೇ ಸಭೆ ಮಾಡಲಿ ಅವರಿಗೆ ಸಭೆ ಮಾಡುವ ಹಕ್ಕಿದೆ ಮಾಡಲಿ, ಎಲ್ಲ ಪಕ್ಷಗಳೂ ಸಭೆ ಮಾಡ್ತಾರೆ. ಆದರೆ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದರು.
ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಮಾತುಕತೆ: ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಎನ್ನುವ ವರದಿಗಳು ಬಂದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದರು. ಮುಂದಿನ ರಾಜಕೀಯ ಲೆಕ್ಕಾಚಾರದ ಕುರಿತು ಚರ್ಚಿಸಿದರು.
ಕುಮಾರಪಾರ್ಕ್ ನಲ್ಲಿರುವ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಪ್ರಸ್ತುತ ಮತದಾನೋತ್ತರ ಸಮೀಕ್ಷೆಗಳ ವರದಿ ಕುರಿತು ಚರ್ಚೆ ನಡೆಸಿದರು. ಪಕ್ಷ ಸಂಗ್ರಹ ಮಾಡಿರುವ ಅಂಕಿ ಅಂಶಗಳು, ಬೂತ್ ಪ್ರಮುಖರಿಂದ ಪಡೆದ ವರದಿ ಜೊತೆಗೆ ಸಮೀಕ್ಷಾ ವರದಿಗಳ ತಾಳೆ ನೋಡಿ ಚರ್ಚಿಸಿದರು.
ಸಮೀಕ್ಷೆಗಳು ಕಾಂಗ್ರೆಸ್ಗೆ ಅಧಿಕಾರ ಎಂದು ಬಂದಿದ್ದರೆ ಶತಾಯಗತಾಯ ಅಧಿಕಾರ ಹಿಡಿಯಲೇಬೇಕು. ಅದಕ್ಕಾಗಿ ಮಾಡಬೇಕಾಗಿರುವ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಿದರು. ಒಂದಷ್ಟು ಕಡಿಮೆ ಸ್ಥಾನ ಬಂದರೂ ಸರ್ಕಾರ ರಚನೆ ಮಾಡಬೇಕು. ಅದಕ್ಕಾಗಿ ಏನೆಲ್ಲ ಮಾಡಬೇಕು ಎನ್ನುವ ಕುರಿತು ಮಾತುಕತೆ ನಡೆಸಿದ್ದಾರೆ.
ಸದ್ಯದ ಸಮೀಕ್ಷಾ ವರದಿಗಳು ಹಾಗು ಪಕ್ಷದ ವರದಿಯನ್ನು ಹೈಕಮಾಂಡ್ಗೆ ಕಳುಹಿಸಿಕೊಡಲಾಗಿದ್ದು ಆ ಬಗ್ಗೆಯೂ ಯಡಿಯೂರಪ್ಪ ಜೊತೆ ಸಿಎಂ ಚರ್ಚಿಸಿದರು. ಚುನಾವಣೆ ನಂತರ ಯಡಿಯೂರಪ್ಪ ನಿವಾಸದಲ್ಲಿ ನಡೆದ ಮೊದಲ ಸಭೆ ಇದಾಗಿದ್ದು, ರಾಜಕೀಯವಾಗಿ ಬಿಜೆಪಿ ಮುಂದಿಡಬೇಕಾದ ಹೆಜ್ಜೆಗಳ ಕುರಿತು ಚರ್ಚಿಸಿದರು. ಬಹುಶಃ ಆಪರೇಷನ್ ಕಮಲದ ವಿಚಾರವೂ ಚರ್ಚೆಯಾಗಿದೆ ಎನ್ನಲಾಗುತ್ತಿದೆ.
ಬಿಎಸ್ವೈ ಜೊತೆ ಸಿಎಂ ಚರ್ಚೆ ವೇಳೆ ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜ್ಯಸಭಾ ಸದಸ್ಯ ಹಾಗು ಬಿಎಎಎಸ್ವೈ ಆಪ್ತ ಲಹರ್ ಸಿಂಗ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಯಡಿಯೂರಪ್ಪ ನಿವಾಸಕ್ಕೆ ಮುರುಗೇಶ್ ನಿರಾಣಿ ಆಗಮಿಸಿದರು. ನಾಳೆ ವಿಧಾನಸಭೆ ಫಲಿತಾಂಶ ಹಿನ್ನೆಲೆಯಲ್ಲಿ ಯಡಿಯೂರಪ್ಪ ಭೇಟಿ ಮಾಡಿದ ಮುರುಗೇಶ್ ನಿರಾಣಿ ಕೆಲಕಾಲ ಮಾತುಕತೆ ನಡೆಸಿದರು.
ಸಿಎಂ ನಿವಾಸಕ್ಕೆ ಸಚಿವರ ದೌಡು: ಸಿಎಂ ಭೇಟಿಗೆ ಒಬ್ಬೊಬ್ಬರಾಗಿಯೇ ಸಚಿವರು ಆಗಮಿಸಿ ಮಾತುಕತೆ ನಡೆಸಿದರು. ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಎಂಟಿಬಿ ನಾಗರಾಜ್ ಹಾಗು ವಿ.ಸೋಮಣ್ಣ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದರು. ವರುಣಾ & ಚಾಮರಾಜನಗರ ಎರಡೂ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸೋಮಣ್ಣ ನಾಳೆ ಫಲಿತಾಂಶ ಹಿನ್ನೆಲೆ ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದರು. ಸೋಲು, ಗೆಲುವಿನ ಅಂತರದ ಬಗ್ಗೆ ಬೊಮ್ಮಾಯಿ ಜೊತೆ ವಿ.ಸೋಮಣ್ಣ ಚರ್ಚೆ ನಡೆಸಿದರು.
ಸಚಿವ ಎಂಟಿಬಿ ನಾಗರಾಜ್ ಚುನಾವಣೆ ಬಳಿಕ ಕ್ಷೇತ್ರದ ಹಾಗು ಹೋಗುಗಳ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿದರು. ಪುತ್ರನಿಗೆ ಟಿಕೆಟ್ ಡಿಮ್ಯಾಂಡ್ ಮಾಡಿದ್ದರೂ ಎಂಟಿಬಿ ಅವರಿಗೇ ಟಿಕೆಟ್ ನೀಡಲಾಗಿತ್ತು. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ ಪರಾಭವಗೊಂಡಿದ್ದ ಎಂಟಿಬಿಗೆ ಈ ಬಾರಿಯೂ ಪ್ರಬಲ ಪೈಪೋಟಿ ಶರತ್ ಬಚ್ಚೇಗೌಡ ನೀಡಿದ್ದಾರೆ ಈ ಹಿನ್ನಲೆಯಲ್ಲಿ ರಾಜಕೀಯ ವಿದ್ಯಮಾನಗಳ ಕುರಿತು ಸಿಎಂ ಜೊತೆ ಎಂಟಿಬಿ ನಾಗರಾಜ್ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ: ನಾಳೆ ವಿಧಾನಸಭೆ ಚುನಾವಣಾ ಫಲಿತಾಂಶ; ಮತ ಎಣಿಕಾ ಕೇಂದ್ರಗಳಿಗೆ ಬಿಗಿ ಭದ್ರತೆ