ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಇಂದು (ಬುಧವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಕುರಿತು ಮಹತ್ವದ ಮಾತುಕತೆ ನಡೆಸಿದರು. ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾನುವಾರ ರಾತ್ರಿ ನವದೆಹಲಿಗೆ ತೆರಳಿರುವ ಬೊಮ್ಮಾಯಿ, ಹೈಕಮಾಂಡ್ ನಾಯಕರ ಭೇಟಿಗೆ ಸಾಕಷ್ಟು ಕಸರತ್ತು ನಡೆಸಿದ್ದರು. ಸೋಮವಾರ ಯಾವುದೇ ನಾಯಕರ ಭೇಟಿ ಮಾಡಲಾಗದೇ ಇದ್ದರೂ ಮಂಗಳವಾರ ಅಮಿತ್ ಶಾರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಕುರಿತು ಮಾತುಕತೆ ನಡೆಸಿದ್ದರು. ಈ ವೇಳೆ, ರಾಜ್ಯ ಬಿಜೆಪಿಗೆ ಹೊಸ ತಂಡ ರಚನೆ, ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಮಾತುಕತೆ ನಡೆದಿತ್ತು.
ರಾಷ್ಟ್ರೀಯ ಅಧ್ಯಕ್ಷರ ಭೇಟಿಯಲ್ಲೂ ಬೊಮ್ಮಾಯಿ, ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರದ ಕಗ್ಗಂಟು ಕುರಿತು ಚರ್ಚಿಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಆರ್.ಅಶೋಕ್, ಅಶ್ವತ್ಥನಾರಾಯಣ್, ಸುನೀಲ್ ಕುಮಾರ್ ಪ್ರಮುಖ ಆಕಾಂಕ್ಷಿಗಳಾಗಿದ್ದು, ಬಸವರಾಜ ಬೊಮ್ಮಾಯಿ ಪರವೇ ಯಡಿಯೂರಪ್ಪ ಒಲವು ಹೊಂದಿದ್ದಾರೆ. ಹೀಗಾಗಿ ಈ ವಿಚಾರದ ಕುರಿತೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯ ವಿಚಾರ: ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದ್ದು, ನಾಯಕತ್ವ ಬಹಳ ಮುಖ್ಯವಾಗಲಿದೆ. ಯಾರಿಗೇ ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷ ಸ್ಥಾನ ನೀಡಿದರೂ ಯಡಿಯೂರಪ್ಪ ಪಾತ್ರ ಬಹಳ ಮುಖ್ಯವಾಗಿದೆ. ಯಡಿಯೂರಪ್ಪ ವಿರೋಧ ಕಟ್ಟಿಕೊಂಡಲ್ಲಿ ಚುನಾವಣೆಯಲ್ಲಿ ಹಿನ್ನಡೆ ಖಚಿತವಾಗಲಿದೆ. ಹಾಗಾಗಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡಬೇಕಿದ್ದು, ಅದಕ್ಕೆ ಪೂರಕವಾಗಿ ಬೊಮ್ಮಾಯಿ ಅವರೊಂದಿಗೆ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎಂದು ಹೇಳಲಾಗಿದೆ.
ಉತ್ತಮ ಪ್ರತಿಪಕ್ಷ ನಾಯಕರ ಆಯ್ಕೆ ಭರವಸೆ: ಈಗಾಗಲೇ ಅಮಿತ್ ಶಾ ಅವರು ರಾಜ್ಯಕ್ಕೆ ಹೊಸ ಸಮರ್ಥ ತಂಡ ಕೊಡುತ್ತೇವೆ, ಉತ್ತಮ ಪ್ರತಿಪಕ್ಷ ನಾಯಕರ ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದು, ಇದೀಗ ಜೆ.ಪಿ.ನಡ್ಡಾ ಕೂಡ ನಾಯಕರ ಆಯ್ಕೆ ನಮಗೆ ಬಿಡಿ, ಸಂಘಟನೆಯತ್ತ ಗಮನ ಕೊಡಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಗಟ್ಟಿ ಧನಿ ಎತ್ತಬೇಕು. ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು'' ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ? : ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಕಿಡಿ