ಬೆಂಗಳೂರು : ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಭಾಪತಿ ಹಾಗೂ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಬಾಗಿಲು ತೆಗೆಯಲು ಜೆಡಿಎಸ್ನಲ್ಲಿ ಅವರಿಗೆ ಸಿಕ್ಕ ಸ್ಥಾನಮಾನ, ಮನ್ನಣೆ ಕಾರಣ. ಜೆಡಿಎಸ್ ವಿರುದ್ಧ ಮುಗಿಬೀಳುವ ಮುನ್ನ ತಾವು ರಾಜಕಾರಣದಲ್ಲಿ ಮಾಗಿದ್ದು ಎಲ್ಲಿ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೊರಟ್ಟಿ ಕುಟುಕಿದ್ದಾರೆ.
ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೆಡಿಎಸ್ ಪಕ್ಷ ಒಂದು ಅವಕಾಶವಾದಿ ಪಕ್ಷ. ಜೆಡಿಎಸ್ ಸ್ವಾರ್ಥ ಇರುವವರು ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದ್ರೂ ಹೋಗುತ್ತಾರೆ. ಬಿಜೆಪಿ ಜೊತೆಯೂ ಹೋಗುತ್ತಾರೆ, ಆರ್ಎಸ್ಎಸ್ ಜೊತೆಯೂ ಸೇರಿಕೊಂಡ್ರೂ ಸೇರಿಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದರು. ಇದಕ್ಕೀಗ ಜೆಡಿಎಸ್ ಪಕ್ಷದ ಬಹುತೇಕ ನಾಯಕರು ತಮ್ಮದೇ ಆದ ರೀತಿಯಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.