ಬೆಂಗಳೂರು : ಸದನದಿಂದ ನಾನು ಮಾಧ್ಯಮದವರನ್ನು ದೂರ ಇಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದನದಿಂದ ನಾನು ಮಾಧ್ಯಮದವರನ್ನು ದೂರ ಇಡುವ ವಿಚಾರವನ್ನು ಒಪ್ಪಲ್ಲ. ಮಾಧ್ಯಮದವರು ಕಲಾಪವನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ಆದರೆ, ಕೆಲ ವಿಚಾರಗಳನ್ನು ಪದೇಪದೆ ಕೆಲ ಮಾಧ್ಯಮಗಳು ತೋರಿಸುತ್ತಾ ಇರುತ್ತವೆ.
ಸದಸ್ಯರು ಮೊಬೈಲ್ ಬಳಸುವುದು, ನಿದ್ದೆ ಮಾಡುವುದು ಇಂತಹಾ ವಿಚಾರಗಳನ್ನು ಹೆಚ್ಚು ತೋರಿಸುತ್ತಾ ಇರುತ್ತಾರೆ. ಆದರೆ, ಕೆಲ ಉಪಯುಕ್ತ ಚರ್ಚೆಗಳು ಆಗುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳು ತೋರಿಸುವುದೇ ಇಲ್ಲ ಎಂದು ವಿಷಾದಿಸಿದರು.
ಸದಸ್ಯರು ತಪ್ಪು ಮಾಡಿದಾಗ ಮಾಧ್ಯಮಗಳು ತೋರಿಸುವುದು ತಪ್ಪಲ್ಲ. ಆದರೆ, ಒಂದೇ ಘಟನೆಯನ್ನು ಪದೇಪದೆ ತೋರಿಸುವುದು ಎಷ್ಟು ಸರಿ?. ಆದರೆ, ಮಾಧ್ಯಮದವರಿಗೆ ಯಾವುದೇ ನಿರ್ಬಂಧಗಳನ್ನು ಹೇರುವುದಿಲ್ಲ. ಈ ಹಿಂದೆ ಹೇಗೆ ವ್ಯವಸ್ಥೆ ಇತ್ತೋ ಅದನ್ನೇ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.
ಮಾಧ್ಯಮಗಳನ್ನ ಯಾವುದೇ ಕಾರಣಕ್ಕೂ ದೂರ ಇಡುವ ಪ್ರಶ್ನೆಯೇ ಇಲ್ಲ. ಕೊರೊನಾ ಕಾರಣಕ್ಕೆ ಇನ್ನೂ ಮಾಧ್ಯಮ ಗ್ಯಾಲರಿಗೆ ಅವಕಾಶ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ಬೇರೆ ಬೇರೆ ಕಡೆ ಮಾಧ್ಯಮಗಳನ್ನ ನಿಷೇಧ ಮಾಡಲಾಗಿದೆ. ನಮ್ಮಲ್ಲಿ ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್‌ನಲ್ಲಿ ಸಂಪೂರ್ಣ ಮೊಬೈಲ್ ಬ್ಯಾನ್ : ವಿಧಾನಪರಿಷತ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರಿಗೂ ಮೊಬೈಲ್ ಬಳಕೆಗೆ ಅವಕಾಶ ನೀಡದಿರುವ ಬಗ್ಗೆ ನಿಯಮ ರೂಪಿಸಲಾಗುತ್ತದೆ ಎಂದರು. ಪರಿಷತ್ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು ಸೇರಿ ಯಾರಿಗೂ ಮೊಬೈಲ್ಗೆ ಬಳಕೆಗೆ ಅವಕಾಶ ನಿಷೇಧ ಸೇರಿ ವಿವಿಧ ವಿಚಾರಗಳ ಬಗ್ಗೆ ನಿಯಮ ರೂಪಿಸುತ್ತೇವೆ ಎಂದರು.
ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ವಿಚಾರವೇ ಇಡೀ ದಿನ ಸುದ್ದಿಯಾಗಿತ್ತು. ಊಟ ಮಾಡಿ ಸದನಕ್ಕೆ ಸದಸ್ಯರು ಬಂದಾಗ ಕೆಲ ನಿಮಿಷ ನಿದ್ದೆ ಮಾಡ್ತಾರೆ. ಮಾಧ್ಯಮಗಳಲ್ಲಿ ಅದೇ ಹೆಚ್ಚು ಸುದ್ದಿಯಾಗುತ್ತಿದೆ. ಇದರಿಂದ ಇಡೀ ಸದನದ ಗೌರವ ಮಣ್ಣಾಗುತ್ತದೆ. ಯಾವುದೋ ಒಂದು ಸಣ್ಣ ಘಟನೆಯನ್ನೇ ದೊಡ್ಡದಾಗಿ ತೋರಿಸಲಾಗುತ್ತದೆ ಎಂದು ವಿಷಾದಿಸಿದರು.
ಮೀಸಲಾತಿ ನೀಡುವುದು ಸೂಕ್ತ : ಮೀಸಲಾತಿ ಸಂಬಂಧ ಪ್ರತಿಕ್ರಿಯಸಿದ ಅವರು, ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಬಡವರಿಗೆ ಮೀಸಲಾತಿ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ. ಬಡತನ, ಆರ್ಥಿಕತೆ ನೋಡಿ ಮೀಸಲಾತಿ ಕೊಡಲಿ. ಸ್ವಾಮೀಜಿಗಳ ಹೋರಾಟದ ಬಗ್ಗೆ ನಾನು ಮಾತಾಡಲ್ಲ ಎಂದರು.