ಬೆಂಗಳೂರು: ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುದಾನಕ್ಕೆ ಆರ್ಥಿಕ ಇಲಾಖೆಯಿಂದ ಕತ್ತರಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ತಿಂಗಳ ಅಂತ್ಯದವರೆಗೆ ಸರ್ಕಾರಕ್ಕೆ ಗಡುವು ಕೊಡುತ್ತೇವೆ. ಸರ್ಕಾರ ಕ್ರಮ ತೆಗೆದುಕೊಳ್ಳದೆ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಸರ್ಕಾರ ಕೂಡಲೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿಗೆ ಅವಕಾಶ ನೀಡಬೇಕು. ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗೆ ಯಾವುದೇ ನಿಬಂಧನೆ ಹಾಕಬಾರದು ಎಂದು ಆಗ್ರಹಿಸಿದರು.
ಕೊರೊನಾ ನೆಪ ಇಟ್ಟುಕೊಂಡು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಸರ್ಕಾರ ಬ್ರೇಕ್ ಹಾಕಿದೆ. ಉಪನ್ಯಾಸರ ನೇಮಕಕ್ಕೂ ಅನುಮತಿ ಕೊಟ್ಟಿಲ್ಲ. ಇದರಿಂದ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ. 2015ರ ನೇಮಕಾತಿಗೆ ಕೊಟ್ಟಿರೋ ಅನುಮತಿ ಮುಂದುವರೆಸಬೇಕು. ಸರ್ಕಾರದಲ್ಲಿ ತಾಳ ತಂತಿ ಇಲ್ಲದಂತೆ ಆಗಿದೆ. ಸರ್ಕಾರ ಆದೇಶ ವಾಪಸ್ ಪಡೆಯದೆ ಹೋದ್ರೆ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
10ನೇ ತರಗತಿವರಗೆ ಆನ್‌ಲೈನ್ ಶಿಕ್ಷಣ ಬೇಡ:
10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ಮಾಡಕೂಡದು ಎಂದು ಹೊರಟ್ಟಿ ಹೇಳಿದರು. ಹಳ್ಳಿಗಳಲ್ಲಿ ಕರೆಂಟ್ ಎಲ್ಲಿದೆ, ಸ್ಮಾರ್ಟ್ ಫೋನ್ ಎಲ್ಲಿದೆ?. ಇದು ಹೇಗೆ ವರ್ಕ್ ಆಗುತ್ತೋ ಗೊತ್ತಿಲ್ಲ. 10ನೇ ತರಗತಿವರೆಗೆ ಆನ್‌ಲೈನ್ ತರಗತಿ ಮಾಡಬಾರದು. ಪಿಯುಸಿ ಬಳಿಕ ಬೇಕಾದರೆ ಆನ್‌ಲೈನ್ ಶಿಕ್ಷಣ ಮಾಡಬಹುದು ಎಂದರು.
ಕೃಷಿಗೆ ಬಳಸದೇ ಇದ್ದರೆ ಜೈಲು ಶಿಕ್ಷೆ ನೀಡಿ:
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವ ಬಗ್ಗೆ ನನ್ನ ವಿರೋಧ ಇದೆ ಎಂದು ಇದೇ ವೇಳೆ ತಿಳಿಸಿದರು.
ಕೃಷಿಗೆ ಕೊಟ್ಟ ಭೂಮಿ ಕೃಷಿಗೆ ಬಳಕೆ ಮಾಡಬೇಕು. ಹಾಗದರೆ ಎಷ್ಟು ಎಕರೆ ಭೂಮಿಯನ್ನಾದರೂ ತೆಗೆದುಕೊಳ್ಳಲಿ. ಒಂದು ವೇಳೆ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ ಅಂಥವರಿಗೆ ಜೈಲು ಶಿಕ್ಷೆಯಾಗಬೇಕು. ಸರ್ಕಾರ ಈ ಸಂಬಂಧ ತಿದ್ದುಪಡಿ ಮಾಡಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 28% ಭೂಮಿ ರಿಯಲ್ ಎಸ್ಟೇಟ್ಗೆ ಹೋಗಿದೆ. ಈಗ ಈ ಕಾಯ್ದೆ ತಂದ್ರೆ ಮತ್ತಷ್ಟು ಭೂಮಿ ರಿಯಲ್ ಎಸ್ಟೇಟ್ಗೆ ಹೋಗುತ್ತೆ. ಕಾಯ್ದೆಯಲ್ಲಿ ಲೋಪ ಇದೆ. ಕೃಷಿಗೆ ತೆಗೆದುಕೊಂಡ ಭೂಮಿ ಕೃಷಿಗೆ ಬಳಸಬೇಕು. ರೈತರ ಪರ ಅಂತ ಯಡಿಯೂರಪ್ಪ ಹೇಳ್ತಾರೆ. ಹಸಿರು ಟವೆಲ್ ಹಾಕ್ತಾರೆ. ಹೀಗೆ ಮಾಡಿದ್ರೆ ರೈತರಿಗೆ ಅನ್ಯಾಯ ಆಗುತ್ತದೆ ಎಂದು ಕಿಡಿಕಾರಿದರು.