ಬೆಂಗಳೂರು: ಪಶುಸಂಗೋಪನೆ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ. ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಪತ್ರ ಬರೆದು ಒತ್ತಾಯ ಮಾಡಿರುವ ಹೊರಟ್ಟಿ, ಪಶು ಇಲಾಖೆಯ ಸಿಬ್ಬಂದಿ ಇಲಾಖೆಗೆ ವಾಪಸ್ ಕರೆಸಿಕೊಳ್ಳಿ ಎಂದಿದ್ದಾರೆ.
ಪ್ರಸ್ತುತ ಪಶು ಸಂಗೋಪನೆ ಇಲಾಖೆಯಲ್ಲಿ ಸುಮಾರು 8,000 ಹುದ್ದೆಗಳು ಖಾಲಿ ಇರುವುದಲ್ಲದೇ, ಸುಮಾರು 1,200 ಹುದ್ದೆಗಳು ಪಶು ಸಂಗೋಪನಾ ಇಲಾಖೆಯಲ್ಲಿ ನೇಮಕಗೊಂಡ ಸಿಬ್ಬಂದಿ ಬೇರೆ-ಬೇರೆ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಕ್ರಿಯೆ ಪಶು ಸಂಗೋಪನಾ ಇಲಾಖೆಯ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಸಿಬ್ಬಂದಿಗಳ ಕೊರತೆಯೂ ಎದ್ದು ಕಾಣುವಂತಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಪಶು ಇಲಾಖೆಯಲ್ಲಿ ನೇಮಕಗೊಂಡು ಬೇರೆ ಇಲಾಖೆಗೆ ನಿಯೋಜನೆಗೊಂಡ ಸಿಬ್ಬಂದಿಗಳ ಸೇವೆಯನ್ನು ಮಾತೃ ಇಲಾಖೆಗೆ ಹಿಂಪಡೆಯುವುದು ಅವಶ್ಯಕವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಗಾಂಜಾ ನಶೆಯಲ್ಲಿ ಯದ್ವಾ-ತದ್ವಾ ಆಟೋ ಓಡಿಸಿ ಅಪಘಾತ: ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ!
ನಮ್ಮದು ಕೃಷಿ ಪ್ರಧಾನ ದೇಶವಾಗಿದೆ. ಇಲ್ಲಿ ಆಹಾರ ಬೆಳೆಗಳನ್ನು ಬೆಳೆದು ದೇಶ-ವಿದೇಶಗಳಿಗೆ ರಫ್ತು ಮಾಡುತ್ತಿರುವ ಅಗ್ರಮಾನ್ಯ ರಾಷ್ಟ್ರಗಳಲ್ಲಿ ಭಾರತ ಮೊದಲನೇಯ ಸ್ಥಾನದಲ್ಲಿದೆ. ಕೃಷಿ ಪ್ರಾಧ್ಯಾನ್ಯತೆ, ಅಭಿವೃದ್ಧಿಗೆ ರೈತರು ಯಂತ್ರೋಪಕರಣಗಳನ್ನು ಅವಲಂಬಿಸಿದ್ದರೂ ಸಹ ತಮ್ಮ ಮನೆ ಮಕ್ಕಳಂತೆ ಸಾಕುತ್ತಿರುವ ರಾಸುಗಳು ಸಹ ವ್ಯವಸಾಯದಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ತೀವ್ರ ಬರಗಾಲ ಹಾಗೂ ಕೋವಿಡ್-19 ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಆರ್ಥಿಕವಾಗಿ ಬಳಲಿರುವ ಕಾರಣ ದನ ಕರುಗಳಿಗೆ ಮೇವಿನ ಕೊರತೆಯ ಜೊತೆಗೆ, ಅನಾರೋಗ್ಯದಿಂದ ಬಹಳಷ್ಟು ದನ ಕರುಗಳು ಸಾವನ್ನಪಿವೆ. ವಯಸ್ಸಾದ ದನ-ಕರುಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ಆರ್ಥಿಕ ಸಂಕಷ್ಟದಲ್ಲಿದ್ದ ರೈತರು ಅವುಗಳನ್ನು ದಲ್ಲಾಳಿಗಳಿಗೆ ಮಾರಾಟ ಮಾಡಿದ ನಿದರ್ಶನಗಳು ಉಂಟು. ಈ ನಿಟ್ಟಿನಲ್ಲಿ ತಾವುಗಳು ಈ ವರ್ಷ “ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ, ಕೃಷಿ ಪ್ರಧಾನವಾದ ನಮ್ಮ ರಾಜ್ಯದಲ್ಲಿ ರಾಸುಗಳ ಅಭಿವೃದ್ಧಿ. ಕಾಳಜಿ, ಆರೈಕೆ ನಮ್ಮೆಲ್ಲರ ಹೊಣೆಯೇ ಸರಿ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಈ ಹಿನ್ನಲೆಯಲ್ಲಿ ತುರ್ತು ಕ್ರಮ ಕೈಗೊಂಡು, ಕೃಷಿ ಪ್ರಧಾನವಾದ ನಮ್ಮ ರಾಜ್ಯದಲ್ಲಿ ಎಲ್ಲಾ ರಾಸುಗಳ ಯೋಗಕ್ಷೇಮಕ್ಕೆ, ರೈತಾಪಿ ವರ್ಗದವರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.