ಬೆಂಗಳೂರು: ನಗರ ಪ್ರದಕ್ಷಿಣೆ ನಡೆಸಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ವರದಿ ಸಲ್ಲಿಸಿದರು. ಈ ವೇಳೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿಗೆ ದಿನದ ಮಾಹಿತಿ ನೀಡಿದರು.
ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಖಂಡಿತವಾಗಿಯೂ ಚರ್ಚೆ ಆಗುತ್ತದೆ. ವೀಕೆಂಡ್ ಕರ್ಫೂ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಸಹ ಸಮಾಲೋಚನೆ ನಡೆಯುತ್ತದೆ. ಲಸಿಕೆ ನೀತಿ ಬಗ್ಗೆ ಸಮಾಲೋಚನೆ ನಡೆಸಿ ಆ ನೀತಿಗೆ ಅಂತಿಮ ಸ್ವರೂಪ ನೀಡಲಾಗುತ್ತದೆ ಎಂದು ಸಿಎಂ ಭೇಟಿ ಬಳಿಕ ಸುದ್ದಿಗಾರರಿಗೆ ಮಾಹಿತಿ ಕೊಟ್ಟರು.
ಸಿಟಿ ರೌಂಡ್ಸ್ ವಿವರ:
ಕೆಆರ್ ಮಾರುಕಟ್ಟೆ ಪ್ರಾಂಗಣವನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಸಚಿವ ಬೊಮ್ಮಾಯಿ, ಮಾಸ್ಕ್ ಯಾಕೆ ಧರಿಸಿಲ್ಲ? ಎಂದು ಪ್ರಶ್ನಿಸಿದರು. ಇಲ್ಲದ್ದಕ್ಕೆ ಉತ್ತರ ನೀಡದ ಮಹಿಳೆಗೆ ತಮ್ಮ ಆಪ್ತ ಸಹಾಯಕರ ಬಳಿ ಇದ್ದ ಮಾಸ್ಕ್ನೀಡಿದರು. ಮಾಸ್ಕ್ ಬಳಕೆ ಮಾಡಿ ಕೊರೊನಾದಿಂದ ದೂರ ಇರುವಂತೆ ಇದೇ ವೆಳೆ ಆ ಮಹಿಳೆಗೆ ಸೂಚಿಸಿದರು.
ಕೆ.ಆರ್ ಮಾರುಕಟ್ಟೆಯ ನಂತರ ಆಡುಗೋಡಿಯ ಮಂಗಳ ಕಲ್ಯಾಣ ಮಂಟಪದಲ್ಲಿ ಪೊಲೀಸರಿಗಾಗಿಯೇ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿರುವ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದರು. ಕೊರೊನಾ ಸೋಂಕು ತಗುಲಿದ ಪೊಲೀಸರಿಗೆ ಇಲ್ಲಿ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿರುವ ಹಾಸಿಗೆ, ಔಷಧಿ ಮತ್ತು ಇತರೆ ವೈದ್ಯಕೀಯ ಸೌಲಭ್ಯಗಳನ್ನು ಸಚಿವರು ಪರಿಶೀಲಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಪಡೆಯಲು ಡಿಸಿಪಿ ಮತ್ತು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿತ್ತು. ಆ ತಂಡಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆಗಳನ್ನು ಸರ್ಕಾರದ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ವಿನಾ ಕಾರಣ ರಸ್ತೆಗಿಳಿಯುವ ಜನರನ್ನು ನಿಯಂತ್ರಿಸಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಕರ್ಫ್ಯೂ ನಿಯಮ ಉಲ್ಲಂಘಿಸಿ ರಸ್ತೆಗಿಳಿಯುವ ಕಿಡಿಗೇಡಿಗಳ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಚಾಮರಾಜಪೇಟೆ, ಸೌತ್ ಎಂಡ್ ಸರ್ಕಲ್, ಕೋರಮಂಗಲ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸಚಿವ ಬೊಮ್ಮಾಯಿ, ಶಿವಾಜಿನಗರದಲ್ಲಿ ಒಂದು ಸುತ್ತು ಹಾಕಿದರು. ಕಮರ್ಷಿಯಲ್ ಸ್ಟ್ರೀಟ್ನಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಕರ್ಫ್ಯೂ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು.