ಬೆಂಗಳೂರು: ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಹತ್ತು ಕೆ.ಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಅಕ್ಕಿ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ ಎಂದರು.
ಕಾಂಗ್ರೆಸ್ನವರು ಚುನಾವಣೆ ಸಂದರ್ಭದಲ್ಲಿ ಹತ್ತು ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆ.ಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ. ಎಷ್ಟಾದರೂ ಆಗಲಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಹಣ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ. ಇವರು ಮತ್ತೆ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ ಎಂದು ಹೇಳಿದರು.
ಕರೆಂಟ್ ವಿಚಾರದಲ್ಲಿಯೂ ಕಂಡಿಷನ್ ಹಾಕಿ ಅದನ್ನೇ ಮಾಡಿದ್ದಾರೆ. ಹತ್ತು ಕೆ.ಜಿ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಸೆಂಬರ್ವರೆಗೂ ಕೊಟ್ಟಿದೆ. ಎಷ್ಟೇ ಖರ್ಚಾದರೂ ಅಕ್ಕಿ ಕೊಡುವುದಾಗಿ ಹೇಳಿದವರು ಈಗ ಮಾತಿಗೆ ತಪ್ಪಿ ಜನರಿಗೆ ಎರಡೂವರೆ ಕೆಜಿ ಮಾತ್ರ ದೊರೆಯುವಂತೆ ಮಾಡಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.
ಇದನ್ನೂ ಓದಿ: Annabhagya: ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ: ಅಕ್ಕಿ ಬದಲು ಹಣ ಪಾವತಿಸಲು ಸರ್ಕಾರ ನಿರ್ಧಾರ
ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ: ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಹೆಚ್ಚುವರಿ ಅಕ್ಕಿ ನೀಡಲು ನಾವು ತೀರ್ಮಾನಿಸಿದರೆ ಕೇಂದ್ರ ಸರ್ಕಾರ ಕುತಂತ್ರದಿಂದ ಇದನ್ನು ತಪ್ಪಿಸಿದೆ. ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರಧಾನ್ಯವನ್ನು ಜುಲೈ 1ರಿಂದ ನೀಡಬೇಕಾಗಿದೆ. ನಾವು ನಮ್ಮ ನಿಲುವಿನಿಂದ ಹಿಂದೆ ಸರಿಯದೆ ಯೋಜನೆಯನ್ನು ಜುಲೈ 1ರಿಂದಲೇ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದರು.
ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ.170 ಅನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನೀಡುವ ಹೆಚ್ಚುವರಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂಪಾಯಿ ನೀಡಲಾಗುವುದು ಎಂದ ಅವರು, ಯೋಜನೆಯಡಿ ನೀಡುವ ಹಣ ಬಿಪಿಎಲ್ ಕಾರ್ಡುದಾರರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.