ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ತಿಂಗಳು ಸಂದಿವೆ. ರಾಜ್ಯದ ಗದ್ದುಗೆಗೇರಿದ ಕೆಲವೇ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾಡಿದ ಕೆಲಸಗಳು ಜನರಿಗೆ ಇಷ್ಟವಾಗಿವೆ. ಅದರ ಜೊತೆಗೆ 'ಸಿಂಪಲ್ ಸಿಎಂ' ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಬೊಮ್ಮಾಯಿ ಸಿಎಂ ಆಗಿದ್ದೇ ಅಚ್ಚರಿ: ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರಾಗುತ್ತಾರೆಂಬ ಕುತೂಹಲ ಇತ್ತು. ಸಿಎಂ ರೇಸ್ನಲ್ಲಿ ಹಲವಾರು ನಾಯಕರ ಹೆಸರುಗಳು ಕೇಳಿ ಬಂದಿದ್ದವು. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಅಥವಾ ಹಿಂದುಳಿದ ವರ್ಗಗಳ ಸಮುದಾಯದವರು ಮುಖ್ಯಮಂತ್ರಿಯಾಗುತ್ತಾರೆಂಬೆಲ್ಲಾ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಆದರೆ, ಹೈಕಮಾಂಡ್ ಲೆಕ್ಕಾಚಾರವೇ ಬೇರೆಯಾಗಿತ್ತು. ಎರಡು ದಿನ ಚರ್ಚೆ ನಡೆಸಿದ ದೆಹಲಿ ವರಿಷ್ಠರು, ಒಂದು ಹೆಸರನ್ನು ಅಂತಿಮಗೊಳಿಸಿದರು.
ದೆಹಲಿಯಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೆಸರನ್ನು ಹೊತ್ತು ತಂದರು. ಜುಲೈ 27 ರಂದು ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಎಂ ಆಗುವ ಆ ಹೆಸರನ್ನು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು. ಬಸವರಾಜ ಬೊಮ್ಮಾಯಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಬಹುತೇಕ ನಾಯಕರಿಗೆ ಆಶ್ಚರ್ಯವಾಗಿತ್ತು. ಸ್ವತಃ ಬಸವರಾಜ ಬೊಮ್ಮಾಯಿ ಅವರಿಗೂ ಅಚ್ಚರಿಯಾಗಿತ್ತು.
ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಪುತ್ರರಾದ ಬಸವರಾಜ ಬೊಮ್ಮಾಯಿ ಜುಲೈ 28 ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಉಂಟಾಗಬಹುದಾದ ನಷ್ಟವನ್ನು ಭರಿಸುವ ಉದ್ದೇಶದಿಂದ ಮತ್ತೆ ಲಿಂಗಾಯತರಿಗೆ ಹೈಕಮಾಂಡ್ ಮಣೆ ಹಾಕಿದೆ ಎಂಬ ಮಾತುಗಳು ಕೇಳಿಬಂದಿವು.
ಸಿಂಪಲ್ ಸಿಎಂ: ಬಸವರಾಜ ಬೊಮ್ಮಾಯಿ ರಾಜಕೀಯ ಕುಟುಂಬದಿಂದ ಬಂದವರು. ತಂದೆ, ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಬೊಮ್ಮಾಯಿ ಗರಡಿಯಲ್ಲಿ ಪಳಗಿದವರು. ತಂದೆಯವರು ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಲೇ ರಾಜಕೀಯ ಪ್ರವೇಶಿಸಿ ಹಲವಾರು ಹೋರಾಟದಲ್ಲಿ ಪಾಲ್ಗೊಂಡಿದ್ದ ಬಸವರಾಜ ಬೊಮ್ಮಾಯಿ, ತಂದೆ ಸಿಎಂ ಆಗಿದ್ದರೂ ಯಾವುದೇ ಹಮ್ಮುಬಿಮ್ಮುಗಳನ್ನು ತೋರಿಸದೆ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷದಲ್ಲಿ ದುಡಿಯುತ್ತಾ, ಹತ್ತಾರು ಹೋರಾಟಗಳನ್ನು ಮಾಡುತ್ತಾ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದವರು.
ಮಹದಾಯಿ ಹೋರಾಟದಲ್ಲಿ ಬೊಮ್ಮಾಯಿ ಅವರದ್ದು ದೊಡ್ಡ ಕೊಡುಗೆಯಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಮೊದಲಿನಿಂದಲೂ ಗಟ್ಟಿಧ್ವನಿಯಂತೆ ಕಾರ್ಯನಿರ್ವಹಿಸಿದ್ದರು. ಇದೀಗ ಬಯಸದೆ ಬಂದ ಭಾಗ್ಯ ಎಂಬಂತೆ ಸಿಎಂ ಆದ ಬಸವರಾಜ ಬೊಮ್ಮಾಯಿ ಅವರು, ಡಿಸಿಎಂ ಸ್ಥಾನಗಳಿಗೆ ಇತಿಶ್ರೀ ಹಾಡಿದರು. ಸಂಪುಟ ರಚನೆಯಲ್ಲೂ ದೊಡ್ಡಮಟ್ಟದ ಅಸಮಾಧಾನಕ್ಕೆ ಅವಕಾಶ ಕೊಡದಂತೆ ಬ್ಯಾಲೆನ್ಸ್ ಮಾಡುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ.
ಅಭಿನಂದನೆ ಸಲ್ಲಿಸುವ ವೇಳೆ ಹಾರ, ತುರಾಯಿಗೆ ಬ್ರೇಕ್ ಹಾಕಿ ಪುಸ್ತಕ ನೀಡುವಂತೆ ಘೋಷಣೆ ಮಾಡಿದರು. ಅದಕ್ಕಿಂತಲೂ ಮುಖ್ಯವಾಗಿ ನನಗೆ ಝಿರೋ ಟ್ರಾಫಿಕ್ ಬೇಡವೆಂದು ಹೇಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದ್ದಾರೆ.
ಇವರ ಅಧಿಕಾರವಧಿ ಮುಂದಿನ ಎರಡು ವರ್ಷವಿದ್ದು, ಸಾಕಷ್ಟು ಸವಾಲುಗಳು ಇವೆ. ಚುನಾವಣೆಗಳನ್ನು ಎದುರಿಸುವುದರ ಜೊತೆಗೆ ಕೋವಿಡ್ ಸಮಸ್ಯೆ, ನೀರಾವರಿ ಸೇರಿದಂತೆ ಹಲವಾರು ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆಂಬುದನ್ನ ಕಾದುನೋಡಬೇಕಿದೆ.
ಓದಿ: IMA Case: ಹೇಮಂತ್ ನಿಂಬಾಳ್ಕರ್ ವಿರುದ್ಧದ FIR ರದ್ದು ಆದೇಶಕ್ಕೆ ತಡೆ ನೀಡಿದ ಸುಪ್ರೀಂ