ಬೆಂಗಳೂರು: ಪಕ್ಷದಿಂದ ನನಗೆ ನೋಟಿಸ್ ಬಂದಿದ್ದು, ಅದಕ್ಕೆ 11 ಪುಟಗಳ ಉತ್ತರ ನೀಡಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರ ಕುಟುಂಬದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿರುವ ಬಗ್ಗೆ ಉತ್ತರದಲ್ಲಿ ವಿವರಿಸಿದ್ದೇನೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕೆಲಸ ಮಾಡಿದ ಕಾರ್ಯಕರ್ತ ನಾನು. ಭ್ರಷ್ಟಾಚಾರ ರಹಿತ, ಕುಟುಂಬ ರಾಜಕಾರಣ ರಹಿತ ಆಡಳಿತ ನಡೆಯಬೇಕೆಂಬ ನರೇಂದ್ರ ಮೋದಿ ಅವರ ಕಲ್ಪನೆ ರೀತಿಯಲ್ಲಿ ಆಡಳಿತ ನಡೆಯುತ್ತಿಲ್ಲ.
ವಿಜಯೇಂದ್ರ ಬಗ್ಗೆ, ವರಿಷ್ಠ ಮಂಡಳಿಯಿಂದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದೇನೆ. ಬಿಹಾರ ಚುನಾವಣೆಯಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ಗೆ ವಿಜಯೇಂದ್ರ ಹಣ ನೀಡಿದ್ದಾರೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಲ್ಲಾ ಚುನಾವಣೆ ಗೆಲ್ಲುತ್ತಿದ್ದೇವೆ. ಆ ಶಕ್ತಿ ಕುಗ್ಗಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.
ಇದಕ್ಕೆ ಯಡಿಯೂರಪ್ಪ ಅವರು, ವಿಜಯೇಂದ್ರ ಉತ್ತರ ನೀಡಬೇಕು. ನಾನು ಆರೋಪ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ನಾನು ಯಡಿಯೂರಪ್ಪನವರ ಆಡಳಿತ ಭ್ರಷ್ಟಾಚಾರ, ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಸವಿವರವಾಗಿ ಪತ್ರದಲ್ಲಿ ಬರೆದಿದ್ದೇನೆ. ನಾನು ಎಲ್ಲೂ ವಿಷಾದ, ಕ್ಷಮೆ ಕೇಳಿಲ್ಲ ಎಂದು ಹೇಳಿದರು.
ನನಗೆ ಪಕ್ಷ ದ್ರೋಹಿ ಎಂದು ಕಳಂಕ ತರಲು ಹೊರಟಿದ್ದಾರೆ. ನಾನು ಪಕ್ಷದ ವಿರುದ್ಧ ಎಂದೂ ಮಾತನಾಡಿಲ್ಲ. ಭ್ರಷ್ಟಾಚಾರ, ಕುಟುಂಬ ಶಾಹಿ ವಿರುದ್ಧ ನನ್ನ ಹೋರಾಟ ಎಂದರು.
ಇದನ್ನೂ ಓದಿ: ಸಿ.ಎಂ. ಇಬ್ರಾಹಿಂ ಪಕ್ಷ ಬಿಡಲಿದ್ದಾರಾ?.. ಏನಂತಾರೆ ಮನವೊಲಿಸಿದ ಸುರ್ಜೆವಾಲಾ ?