ಬೆಂಗಳೂರು: ರಾಜ್ಯದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳು ಆರಂಭವಾಗಿದ್ದು, ಪ್ರತಿದಿನ 80 ಕೋಟಿ ರೂ. ಆದಾಯ ನಿರೀಕ್ಷೆ ಇದೆ. ಜೊತೆಗೆ ಶೇ. 50 ರಷ್ಟು ಹೆಚ್ಚುವರಿ ಆದಾಯ ಗುರಿ ಹೊಂದಲಾಗಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್ಗಳು ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಿವೆ. ಇದೀಗ ಪ್ರತಿನಿತ್ಯ 80 ಕೋಟಿ ರೂ. ಆದಾಯ ಇದೆ. ಅಲ್ಲದೆ, ಹೆಚ್ಚುವರಿ ಶೇ.50 ರಷ್ಟು ಆದಾಯ ನಿರೀಕ್ಷೆ ಹೊಂದಲಾಗಿದೆ ಎಂದರು.
ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಿಯಮ ಉಲ್ಲಂಘಿಸಿದ್ರೆ ಅಂತಹ ಬಾರ್, ಪಬ್ಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
2020-21 ರಲ್ಲಿ ಅಬಕಾರಿ ಇಲಾಖೆಯಲ್ಲಿ ವಾರ್ಷಿಕ 21 ಸಾವಿರ ಕೋಟಿ ರೂ. ಆದಾಯ ಗಳಿಸುವ ಗುರಿ ಹೊಂದಲಾಗಿತ್ತು. ಆದರೆ, ಇದೀಗ 22,700 ಕೋಟಿ ರೂ. ಗುರಿ ಇದೆ ಎಂದರು. ರಾಜ್ಯದಲ್ಲಿ ಹೊಸ 900 ಎಂಎಸ್ಐಎಲ್ಗಳಿಗೆ ಲೈಸೆನ್ಸ್ ಕೊಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಬೇರೆ ಲೈಸೆನ್ಸ್ ಯಾವುದು ಕೊಡುತ್ತಿಲ್ಲ ಎಂದು ತಿಳಿಸಿದರು.