ಬೆಂಗಳೂರು: ಹೇರ್ ಕಟಿಂಗ್ ಅಂಗಡಿ ಮಾಲೀಕನ ಕೊಲೆ ಮಾಡಿದ ಆರೋಪಿಯನ್ನು 24 ಗಂಟೆಗಳೊಳಗಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಹನುಮಂತರಾಜು ಅಲಿಯಾಸ್ ಸುದರ್ಶನ ಬಂಧಿತ ಆರೋಪಿ. ಈತ ಹೇರ್ ಸೆಲ್ಯೂನ್ ಮಾಲೀಕ ಶ್ರೀನಿವಾಸ್ ಎಂಬಾತನನ್ನು ನಿನ್ನೆ ಕೊಚ್ಚಿ ಕೊಲೆ ಮಾಡಿದ್ದ. ಕೊಲೆಯಾದ ಶ್ರೀನಿವಾಸ್ ತನ್ನ ಮೊದಲನೇ ಪತ್ನಿಯನ್ನ ಕೆಲ ವರ್ಷಗಳಿಂದ ಬಿಟ್ಟು ನಂತರ ನ್ಯಾಯಾಲಯದಲ್ಲಿ ಡಿವೋರ್ಸ್ ಗೆ ಅರ್ಜಿ ಹಾಕಿದ್ದ. ಆದ್ರೆ ಈ ನಡುವೆ ಆರೋಪಿ ಹನುಮಂತರಾಜು ಶ್ರೀನಿವಾಸ ಹೆಂಡತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದಿದ್ದ ಶ್ರೀನಿವಾಸ್ ಹನುಮಂತರಾಜು ಜೊತೆ ಜಗಳ ಆಡಿದ್ದ. ಹನುಮಂತರಾಜುಗೆ ಶ್ರೀನಿವಾಸ್ ವಾರ್ನ್ ಮಾಡಿದ್ದ.
ಈ ಹಿನ್ನೆಲೆ ಶ್ರೀನಿವಾಸನನ್ನು ನಿನ್ನೆ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಔಟರ್ ರಿಂಗ್ ರಸ್ತೆ ಬಳಿ ಎಸೆದು ಹೋಗಿದ್ದ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಕೇಸ್ ಹಿನ್ನೆಲೆ:
ಕೊಲೆಯಾದ ಶ್ರೀನಿವಾಸ ಮೂಲತಃ ಜಯನಗರದ ನಿವಾಸಿ. ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲಿ ಹೇರ್ ಕಟಿಂಗ್ ಶಾಪ್ ನಡೆಸುತ್ತಿದ್ದ. ನಿನ್ನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರಸ್ತೆಯಲ್ಲಿ ದುಷ್ಕರ್ಮಿ ಅಂಗಡಿ ಮುಂಭಾಗದಲ್ಲಿ ಕೊಲೆ ಮಾಡಿ ಎಸೆದು ಹೋಗಿದ್ದ.ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.