ಬೆಂಗಳೂರು : ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆಯನ್ನು ತಡೆಹಿಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರಿಗೆ ಹಿರಿಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ ಮತ್ತು ಚಂದ್ರಶೇಖರ ಪಾಟೀಲ್ (ಚಂಪಾ) ಕಟುವಾದ ಶಬ್ಧಗಳಿಂದ ಟೀಕಿಸಿದ್ದಾರೆ.
ಸಚಿವ ಸಿ.ಟಿ.ರವಿ ಅವರು ಸಾಂಸ್ಕೃತಿಕ ಸ್ವಾಯತ್ತತೆಗೆ ಧಕ್ಕೆ ತರುತ್ತಿದ್ದಾರೆ. ಅನುದಾನ ತಡೆಹಿಡಿದಿರುವ ಸಚಿವರ ಕ್ರಮ ಅಸಹನೀಯ ಮತ್ತು ಅನುಚಿತ ನಡೆಯಾಗಿದೆ ಜಂಟಿ ಮಾಧ್ಯಮ ಹೇಳಿಕೆಯಲ್ಲಿ ಹಿರಿಯ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಜಿಲ್ಲಾ ಕಸಾಪ ಕಾರ್ಯಕಾರಿಣಿ ಆಯ್ಕೆ ಮಾಡಿದ್ದಕ್ಕೆ ಅಸಮಾಧಾನಗೊಂಡ ಸಚಿವ ಸಿ.ಟಿ.ರವಿ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡದಂತೆ ಕೇಂದ್ರ ಕಸಾಪ ಅಧ್ಯಕ್ಷರಾದ ಮನು ಬಳಿಗಾರ್ ಅವರಿಗೆ ಆದೇಶ ನೀಡಿದ್ದಾರೆ. ಸಚಿವರ ಈ ಹಸ್ತಕ್ಷೇಪದ ಬಗ್ಗೆ ಸಾಹಿತ್ಯಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯತೊಡಗಿವೆ.
ಅನುದಾನ ಬಿಡುಗಡೆ ತಡೆಹಿಡಿದಿರುವ ಸಚಿವರ ಕ್ರಮವನ್ನು ಮಾಧ್ಯಮ ಹೇಳಿಕೆಯಲ್ಲಿ ತೀವ್ರವಾಗಿ ವಿರೋಧಿಸಿರುವ ಪ್ರೊ.ಬರಗೂರು ಮತ್ತು ಚಂಪಾ ಅವರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸಮ್ಮೇಳನಾಧ್ಯಕ್ಷರನ್ನು ಬದಲಾವಣೆಗೆ ಒತ್ತಡ ಹಾಕುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.
ಸರಕಾರ ಅನುದಾನ ನೀಡುವುದು ತೆರಿಗೆದಾರರ ಹಣವಾಗಿದೆ. ಸಾಹಿತ್ಯ ಪರಿಷತ್ತಿಗೆ ಬಿಡುಗಡೆ ಮಾಡಿದ ಅನುದಾನವನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆ ಮಾಡಲು ಕಸಾಪ ಅಧ್ಯಕ್ಷರಾಗಿರುವ ಮನು ಬಳಿಗಾರ್ ಅವರು ಸಚಿವರ ಆದೇಶ ಪಾಲಿಸಬೇಕಿಲ್ಲ ಎಂದು ಹೇಳಿದ್ದಾರೆ.
ಕಲ್ಕುಳಿ ವಿಠಲ ಹೆಗ್ಡೆ ಯನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆ ಮಾಡಿದ ಚಿಕ್ಕಮಗಳೂರು ಜಿಲ್ಲಾ ಕಸಾಪ ತೀರ್ಮಾನ ಧಿಕ್ಕರಿಸುವ ಸಚಿವ ಸಿ.ಟಿ.ರವಿ ಅವರಿಗೆ ಪ್ರಜಾಪ್ರಭುತ್ವದ ಮೂಲ ತತ್ವವೇ ತಿಳಿದಿಲ್ಲ. ಅವರದ್ದು ಅಸಹನೆಯ ಮತ್ತೊಂದು ರೂಪವಾಗಿದೆ ಸಾಂಸ್ಕೃತಿಕ ಲೋಕವನ್ನು ನಿಯಂತ್ರಿಸುವ ಕೆಟ್ಟ ಕ್ರಮವಾಗಿದೆ. ಕೂಡಲೇ ತಡೆಹಿಡಿದಿರುವ ಅನುದಾನದ ಹಣವನ್ನು ಬಿಡುಗಡೆ ಮಾಡಬೇಕೆಂದು ಬರಗೂರು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.