ಬೆಂಗಳೂರು: ಬಾಪೂಜಿನಗರ ಹಾಗೂ ಪಾದರಾಯನಪುರ ಈ ಎರಡು ವಾರ್ಡ್ ಗಳನ್ನು ಸಂಪೂರ್ಣವಾಗಿ ಹದಿನಾಲ್ಕು ದಿನಗಳ ಕಾಲ ಕ್ಲಾಂಪ್ ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಅಲ್ಲದೇ ಪ್ರತೀ ಮನೆಗೆ ತರಕಾರಿ ದಿನಬಳಕೆ ಅಗತ್ಯ ಸಾಮಾಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು. ಮೆಡಿಕಲ್ ಎಮರ್ಜೆನ್ಸಿ ಬಿಟ್ಟರೆ, ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದು ಬಿಬಿಎಂಪಿ ಸೂಚಿಸಿದೆ.
ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್, 134,135 ವಾರ್ಡ್ ಗಳಲ್ಲಿ ಐದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ವಾರ್ಡ್ ಗಳಲ್ಲಿ ಹತ್ತಿರ ಹತ್ತಿರ ಮನೆಗಳಿದೆ. ಜನಸಂಖ್ಯೆ ಹೆಚ್ಚಿದೆ. ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಬಾರದೆಂದು ಇಂದಿನಿಂದಲೇ ಕ್ಲಾಂಪ್ ಡೌನ್ ಮಾಡಲಾಗ್ತಿದೆ ಎಂದರು.
ಅಲ್ಲದೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಪ್ರತೀ ಮನೆಯ ಹೆಲ್ತ್ ಸರ್ವೇ ನಡೆಸಲಿದ್ದಾರೆ. ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಪ್ರೈಮರಿ- ಸೆಕೆಂಡರಿ ಸಂಪರ್ಕದ ಜನರನ್ನು ಪತ್ತೆ ಹಚ್ಚಬೇಕಿದೆ. ಅತಿಹೆಚ್ಚು ಸಣ್ಣ ಸಣ್ಣ ರಸ್ತೆ, ಗಲ್ಲಿಗಳಲ್ಲಿ ಬಡ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿ ಎಲ್ಲಾ ಕಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ನೈರ್ಮಲ್ಯೀಕರಣವನ್ನು ಮಾಡಬೇಕಿದೆ. ಹದಿನಾಲ್ಕು ದಿನದ ವರೆಗೆ ಸಂಪೂರ್ಣವಾಗಿ ಕ್ಲಾಂಪ್ ಡೌನ್ ಇರಲಿದೆ ಎಂದರು.
ಇನ್ನು ಸೋಂಕು ತಗುಲಿದ ಅಕ್ಕಪಕ್ಕದ ಮನೆಯವರನ್ನು ಶಿಫ್ಟ್ ಮಾಡುತ್ತೇವೆ. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಪೊಲೀಸರು ಜನ ಮನೆಯಿಂದ ಹೊರ ಬಾರದಂತೆ ಎಚ್ಚರ ವಹಿಸಲಿದ್ದಾರೆ ಎಂದು ತಿಳಿಸಿದರು.