ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಕೋ ಆಪರೇಟಿವ್ ಬ್ಯಾಕ್ ಹಗರಣ ಬೆಳಕಿಗೆ ಬಂದಿದೆ. ನಗರದಲ್ಲಿ ಐ.ಎಂ.ಎ, ಕಣ್ವ, ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನಂತರ ಮುನ್ನೆಲೆಗೆ ಬಂದ ವಂಚನೆ ಪ್ರಕರಣ ಇದಾಗಿದೆ.
ಹನುಮಂತನಗರದಲ್ಲಿರುವ ವಸಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್/ಸೊಸೈಟಿಯಲ್ಲಿ ಗ್ರಾಹಕರು ಸುಮಾರು 450 ಕೋಟಿ ರೂ. ಯಷ್ಟು ಡೆಪಾಸಿಟ್ ಇಟ್ಟಿದ್ದಾರೆ. ಕಳೆದ ಡಿಸೆಂಬರ್‌ನಿಂದ ಮೆಚ್ಯುರಿಟಿ ಮತ್ತು ಬಡ್ಡಿ ಹಣವನ್ನು ಕೇಳಿದಾಗ ಕಳ್ಳಾಟ ನಡೆಸುತ್ತಿದ್ದರು. ಹಣ ವಾಪಸ್ ಕೇಳಿದರೆ ಲಾಕ್‌ಡೌನ್‌ನಿಂದಾಗಿ ಸಾಲದ ಹಣ ಬರುತ್ತಿಲ್ಲ ಎಂದು ಸಬೂಬು ನೀಡುತ್ತಿದ್ದರು ಅನ್ನೋದು ಗ್ರಾಹಕರ ಆರೋಪ.
ಇದರಿಂದ ರೋಸಿ ಹೋದ ಗ್ರಾಹಕರು ಬ್ಯಾಂಕ್ ಮುಖ್ಯಸ್ಥರಾದ ವೆಂಕಟನಾರಾಯಣ ಹಾಗು ಕೃಷ್ಣ ಪ್ರಸಾದ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಇದೀಗ ಹನುಮಂತನಗರ ಠಾಣೆಯಲ್ಲಿ ಸೊಸೈಟಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಎಫ್.ಐ.ಆರ್ ಆದ ತಕ್ಷಣ ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ಪರಾರಿಯಾಗಿದ್ದಾರೆ.
ಹನುಮಂತನಗರ ಠಾಣೆ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಹಣದ ವಹಿವಾಟು ನಡೆಸುತ್ತಿದ್ದು, ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿ/ಬ್ಯಾಂಕ್ ಅಧೀನದಲ್ಲಿತ್ತು. ಎಫ್.ಐ.ಆರ್ ಗೂ ಮುನ್ನ ಸ್ಥಳಿಯ ಶಾಸಕ ರವಿಸುಬ್ರಮಣ್ಯ ಮಾತುಕತೆ ನೆಡಸಿ ಕೆಲವು ದಿನ ಕಾಲಾವಕಾಶ ನೀಡುವಂತೆ ಹೂಡಿಕೆದಾರರಿಗೆ ಹೇಳಿದ್ದರು ಎಂದು ತಿಳಿದುಬಂದಿದೆ. ಶಾಸಕರ ಮಾತಿಗೂ ಬೆಲೆ ಕೊಡದೆ ಮುಖ್ಯಸ್ಥರು ಹೂಡಿಕೆ ಹಣ ವಾಪಸ್ ನೀಡದಿದ್ದಾಗ ಎಫ್ ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ವಂಚನೆ ಪ್ರಕರಣ ಎಸಿಬಿಯಿಂದ ಸಿಐಡಿಗೆ ಹಸ್ತಾಂತರ