ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಇದೇ ಫೆಬ್ರವರಿ 18ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಅಧ್ಯಕ್ಷರಾದ 72 ವರ್ಷದ ಕೆ. ರಾಮಕೃಷ್ಣರನ್ನು ಸೋಮವಾರ ಸಂಜೆ ಬಂಧಿಸಿದ್ದ ಇ.ಡಿ ಅಧಿಕಾರಿಗಳು, ಮಂಗಳವಾರ ನಗರದ ಪ್ರಧಾನ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶ ಅನಿಲ್ ಬಿ. ಕಟ್ಟಿ ಅವರು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಇದೇ ಫೆ. 18ರವರೆಗೆ ಇ.ಡಿ ವಶಕ್ಕೆ ಒಪ್ಪಿಸಿ ಆದೇಶಿಸಿದರು.
ಓದಿ: ವಿಶ್ವಾಸ ಹೆಚ್ಚಿಸುವ ಕ್ರಮಗಳನ್ನು ಚರ್ಚಿಸಲು ರಷ್ಯಾ ಸಿದ್ಧ : ಪುಟಿನ್
ಕೆ. ರಾಮಕೃಷ್ಣ ಅವರು ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2,876 ಮಂದಿಗೆ 1,544.43 ಕೋಟಿ ರೂಪಾಯಿಯನ್ನು ಸಾಲವಾಗಿ ನೀಡಲಾಗಿದೆ. ಇದರಲ್ಲಿ 892.85 ಕೋಟಿ ರೂಪಾಯಿಯನ್ನು ಬೋಗಸ್ ದಾಖಲೆಗಳಿಗೆ ಸಾಲವಾಗಿ ನೀಡಲಾಗಿದೆ ಎಂದು ಇವರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದೂರು ದಾಖಲಾಗಿತ್ತು.
ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿತಂತೆ ಈಗಾಗಲೇ ಸಿಐಡಿ ಈಗ ತನಿಖೆ ನಡೆಸುತ್ತಿದೆ. ಇನ್ನು ಬೋಗಸ್ ದಾಖಲೆಗಳಿಗೆ ನೀಡಲಾಗಿದೆ ಎಂಬ 892 ಕೋಟಿ ರೂಪಾಯಿ ಹಣ ಏನಾಯಿತು ಎಂಬ ಕುರಿತು ರಾಮಕೃಷ್ಣರನ್ನು ವಿಚಾರಣೆಗೆ ಕರೆಸಿದ್ದ ಇ.ಡಿ ಅಧಿಕಾರಿಗಳು, ಕೆಲ ಕಾಲ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದರು. ಜಾರಿ ನಿರ್ದೇಶನಾಲಯದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಹಾಜರಾಗಿದ್ದರು.