ಬೆಂಗಳೂರು: ಗ್ರಾಹಕನ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದ ಉದ್ಯೋಗಿಯನ್ನು ವಜಾಗೊಳಿಸಿದ್ದ ಬ್ಯಾಂಕ್ ಆsದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಬ್ಯಾಂಕ್ ಉದ್ಯೋಗಿಗಳ ವಂಚನೆ ಪ್ರಕರಣಗಳು ಜಾಗತಿಕ ಸಮಸ್ಯೆಯಾಗಿವೆ ಎಂದು ಅಭಿಪ್ರಾಯಪಟ್ಟಿದೆ.
ತನ್ನನ್ನು ಉದ್ಯೋಗದಿಂದ ವಜಾಗೊಳಿಸಿದ ಬ್ಯಾಂಕ್ ಹಾಗೂ ಈ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಉದ್ಯೋಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ ಬ್ಯಾಂಕ್ ನಿಂದ ವಜಾಗೊಂಡಿರುವ ಆರೋಪಿತ ಉದ್ಯೋಗಿ ಗ್ರಾಹಕನ ಹಣ ಡ್ರಾ ಮಾಡಿರುವುದನ್ನು ಆತನೇ ಒಪ್ಪಿಕೊಂಡಿದ್ದಾನೆ. ಹೀಗಾಗಿ ಬ್ಯಾಂಕ್ ಆತನನ್ನು ವಜಾಗೊಳಿಸಿರುವ ಹಾಗೂ ಬ್ಯಾಂಕ್ ನಿರ್ಣಯನ್ನು ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಕ್ರಮ ಸರಿ ಇವೆ. ಬ್ಯಾಂಕ್ ಉದ್ಯೋಗಳ ವಂಚನೆಗಳು ಜಾಗತಿಕ ಸಮಸ್ಯೆಯಾಗಿವೆ. ಹಣಕಾಸು ಸಂಸ್ಥೆಗಳಲ್ಲಿನ ವಂಚನೆ ಪ್ರಕರಣಗಳನ್ನು ನಿರ್ಲಕ್ಷಿಸುವಂತಿಲ್ಲ. ಅಂತಹ ಕೃತ್ಯಗಳನ್ನು ಕಠಿಣವಾಗಿ ಹತ್ತಿಕ್ಕುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
ಪರಿಚಿತ ಗ್ರಾಹಕರೊಬ್ಬರಿಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆದುಕೊಟ್ಟಿದ್ದ ಉದ್ಯೋಗಿ ಸ್ವತಃ ತಾವೇ ಹಣ ಪಡೆದು ಅದನ್ನು ಅವರ ಖಾತೆಯಲ್ಲಿ ತುಂಬಿಸುತ್ತಿದ್ದರು. ಕೆಲಸ ಸಮಯದ ಬಳಿಕ ಗ್ರಾಹಕ ತನ್ನ ಖಾತೆಯಿಂದ ಉದ್ಯೋಗಿ ಹಣ ಡ್ರಾ ಮಾಡಿದ್ದಾರೆ ಎಂದು ಬ್ಯಾಂಕ್ ಗೆ ದೂರು ನೀಡಿದ್ದರು. ದೂರಿನ ವಿಚಾರಣೆ ವೇಳೆ ಹಣದ ಅಗತ್ಯವಿದ್ದುದರಿಂದ ಡ್ರಾ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಹಾಗೆಯೇ, ಗ್ರಾಹಕನ ಫಿಕ್ಸೆಡ್ ಡೆಪಾಸಿಟ್ ಖಾತೆಗೂ ಹಣ ತುಂಬದೆ ನಕಲಿ ರಸೀದಿಗಳನ್ನು ನೀಡಿದ್ದು ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡಿತ್ತು.ಬ್ಯಾಂಕ್ ತನ್ನನ್ನು ಸೇವೆಯಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಕೇಂದ್ರ ಕೈಗಾರಿಕಾ ನ್ಯಾಯಾಧಿಕರಣ ಮತ್ತು ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಉದ್ಯೋಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಇದೇ ಆದೇಶವನ್ನು 2007ರ ಜನವರಿ 19ರಂದು ಹೈಕೋರ್ಟ್ ಏಕಸದಸ್ಯ ಪೀಠವೂ ಎತ್ತಿಹಿಡಿದಿತ್ತು. ಈ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಉದ್ಯೋಗಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.