ಬೆಂಗಳೂರು: ಬಾಂಗ್ಲಾದೇಶ ಮೂಲದ ಯುವತಿಗೆ ಆಕೆಯ ಸ್ನೇಹಿತರೇ ಅಮಾನವೀಯ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಹರಿಬಿಟ್ಟ ಪ್ರಕರಣ ನಿನ್ನೆ ನಗರದಲ್ಲಿ ಬೆಳಕಿಗೆ ಬಂದಿದ್ದು ಸಂಚಲನ ಮೂಡಿಸಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಂತ್ರಸ್ತೆಗೆ ಟಾರ್ಚರ್ ಕೊಡುವ ಮತ್ತೊಂದು ವಿಡಿಯೋ ಲಭ್ಯವಾಗಿದೆ.
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ಟಾರ್ಚರ್ ಕೊಡುವ ಮತ್ತೊಂದು ವಿಡಿಯೋ ರಿವೀಲ್ ಆಗಿದೆ. ಆರೋಪಿಗಳು ಆ ಯುವತಿಗೆ ಸತತ 1 ಗಂಟೆಗಳ ಕಾಲ ಕಿಕುರುಳ ನೀಡಿದ್ದಾರೆ. ಹಣಕಾಸಿನ ವಿಚಾರಕ್ಕಾಗಿ ಆರೋಪಿ ಸಾಗರ್ ಎಂಬಾತ ಮೊದಲಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕಾಲಿಗೆ ಬಿದ್ದು ಬಿಟ್ಟುಬಿಡಿ ಎಂದು ಗೋಗರೆದರೂ ಆರೋಪಿಗಳು ಹಲ್ಲೆ ಮುಂದುವರೆಸಿದ್ದಾರೆ. ಸ್ಥಳದಲ್ಲಿದ್ದ ಮತ್ತೋರ್ವ ಯುವತಿ ಸಂತ್ರಸ್ತೆ ಕಿರುಚಾಟ ತಡೆಯಲು ಬಾಯಿಗೆ ವೇಲ್ ಕಟ್ಟಿದ್ದಾಳೆ.
4.53 ನಿಮಿಷಗಳ ಹಲ್ಲೆ ವಿಡಿಯೋ ವೈರಲ್ ಆಗಿದ್ದು, ಸದ್ಯ ಹಲ್ಲೆಗೊಳಗಾದ ಯುವತಿ ಕೇರಳದ ತನ್ನ ಸ್ನೇಹಿತರ ಜತೆ ಕೇರಳದಲ್ಲಿ ವಾಸವಾಗಿದ್ದಳು. ಆರೋಪಿಗಳ ಹೇಳಿಕೆ ಮೇರೆಗೆ ಪೊಲೀಸರು ಯುವತಿಯನ್ನು ಇಂದು ಸಂಜೆಯೊಳಗೆ ಕೇರಳದಿಂದ ನಗರಕ್ಕೆ ಕರೆತರಲಿದ್ದಾರೆ.
ಸಂತ್ರಸ್ತೆ ಮೇಲೆ ಹಲ್ಲೆ ಮಾಡುತ್ತಿರುವ ಬಗ್ಗೆ ಆರೋಪಿಗಳು 5 ನಿಮಿಷ ಮತ್ತು 4 ನಿಮಿಷಗಳ 2 ವಿಡಿಯೋಗಳನ್ನು ಮಾಡಿದ್ದಾರೆ. ಕೇರಳದಿಂದ ಯುವತಿಯನ್ನು ಕರೆತಂದ ಬಳಿಕ ಪೊಲೀಸರು ಸಂತ್ರಸ್ತೆಯಿಂದ ಹೇಳಿಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಗ್ಯಾಂಗ್ ರೇಪ್ ಅಮಾನುಷ ಕೃತ್ಯ, ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ: ಸಿಎಂ ಬಿಎಸ್ವೈ
ವಿದೇಶಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಅಷ್ಟು ಮಾಹಿತಿ ಇಲ್ಲ. ಆದರೆ ಇದು ಅಮಾನುಷ ಕೃತ್ಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಈಗಾಗಲೇ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 'ನಿರ್ಭಯಾ' ರೀತಿಯ ಲೈಂಗಿಕ ದೌರ್ಜನ್ಯ ಕೇಸ್: ಪರಾರಿಗೆ ಯತ್ನಿಸಿದ ಆರೋಪಿಗಳಿಗೆ ಗುಂಡು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದರು. ಇವತ್ತು ಸ್ಥಳ ಮಹಜರಿಗೆ ಇಬ್ಬರನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಮತ್ತೆ ಬಂಧಿಸಿದ್ದಾರೆ.
ಸದ್ಯ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಡಾ. ಶರಣಪ್ಪ ತಂಡದಿಂದ ಈ ಪ್ರಕರಣದ ತನಿಖೆ ನಡೆಯುತ್ತಿದೆ.