ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಹೆಚ್ಚು ಜನಸಂದಣಿ ಉಂಟಾಗುವ ರೈಲ್ವೆ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ವಹಿಸಲು ಮುಂದಾಗಲಾಗಿದೆ. ಹೀಗಾಗಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ಗಳಿಗಾಗಿ ಯುವಿ ಬ್ಯಾಗೇಜ್ ಬಾತ್ ನಿರ್ಮಿಸಲಾಗಿದೆ.
ಪ್ರಯಾಣಿಕರ ಲಗೇಜುಗಳ ಮೇಲಿನ ಸೋಂಕು ನಾಶಮಾಡುವ “ಯುವಿ ಬ್ಯಾಗೇಜ್ ಬಾತ್" ಯಂತ್ರವನ್ನು ಇಂದು ಉದ್ಘಾಟಿಸಲಾಗಿದೆ. ಸುರಂಗ ಆಕೃತಿಯ ಈ ಯಂತ್ರದಲ್ಲಿ ಲಗೇಜ್ ಇಟ್ಟಾಗ ಯಂತ್ರದ ಒಳಗೆ ಹೊಮ್ಮುವ ಅಲ್ಟ್ರಾವೈಲೆಟ್ ಕಿರಣಗಳು ಲಗೇಜ್ ಮೇಲಿರುವ ವೈರಸ್ಗಳನ್ನು ನಾಶ ಮಾಡುತ್ತದೆ. ನಂತರ, “ಸೋಂಕು ಕಳದಿದೆ” ಎಂಬ ಚೀಟಿಯನ್ನು ಲಗೇಜ್ ಮೇಲೆ ಅಂಟಿಸಿ ಪ್ರಯಾಣಿಕರಿಗೆ ಹಿಂದಿರುಗಿಸಲಾಗುತ್ತದೆ.
ಈ ಯಂತ್ರವನ್ನು ಚೆನ್ನೈನ ಮೆ.ಆಪ್ಟಿಮರ್ಸ್ ಬಯೋ ಮತ್ತು ಐಟಿ ಸಲ್ಯೂಷನ್ಸ್ ಅಭಿವೃದ್ಧಿ ಪಡಿಸಿದ್ದು, ಬೆಂಗಳೂರು ಸಂಗೋಳ್ಳಿ ರಾಯಣ್ಣ ನಿಲ್ದಾಣ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆಯ NINFRIS ( New&innovative non- fare revenue ideas scheme) ಯೋಜನೆ ಅಡಿಯಲ್ಲಿ ಅಳವಡಿಸಲಾಗುತ್ತಿದೆ.
ನಿರಂತರ ರೈಲುಗಳ ಸೇವೆ ಆರಂಭವಾದ ನಂತರ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಆಧರಿಸಿ ಇತರ ಪ್ರಮುಖ ರೈಲು ನಿಲ್ದಾಣಗಳಲ್ಲಿ ಈ ಮಾದರಿಯ ಯಂತ್ರಗಳನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ.