ಬೆಂಗಳೂರು: ಅಡುಗೆ ಮಾಡುವ ವಿಷಯವಾಗಿ ನವ ವಿವಾಹಿತೆ, ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯ ನಿವಾಸದಲ್ಲಿ ಘಟನೆ ನಡೆದಿದೆ. ಮಹಿಳಾ ಪಿಸಿ ನೇತ್ರಾ (27) ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪೀಣ್ಯ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಮಂಜುನಾಥ್ ಜೊತೆ ಇವರ ವಿವಾಹ ಆಗಿತ್ತು. ಮೂಲತಃ ಇಬ್ಬರೂ ಕೂಡ ತುಮಕೂರು ಜಿಲ್ಲೆಯವರು. ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.
ಆತ್ಮಹತ್ಯೆಗೆ ಪೊಲೀಸರು ನಿಖರ ಕಾರಣ ಕಲೆಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಅಡುಗೆ ಮಾಡುವ ವಿಷಯವಾಗಿ ಎಂದು ಕಂಡು ಬಂದಿದೆ. ಸದ್ಯ ಪ್ರಕರಣ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.