ಬೆಂಗಳೂರು: ಇಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕುಲಪತಿಗಳಾದ ಪ್ರೊ. ಕೆ.ಆರ್.ವೇಣುಗೋಪಾಲ್ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು.
ಈ ವೇಳೆ ಮಾತಾಡಿದ ಪ್ರೊ. ಕೆ.ಆರ್.ವೇಣುಗೋಪಾಲ್, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಾರರು ತಮ್ಮ ಪ್ರಾಣ ಬಲಿ ಕೊಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು. ಇಂದಿಗೆ 74 ವರ್ಷಗಳು ಕಳೆದಿದ್ದು, ಅದರಲ್ಲೂ ಈ ಕೋವಿಡ್-19ರ ಸಂದರ್ಭದಲ್ಲಿ ನಾವೆಲ್ಲರೂ ಸಾಮೂಹಿಕವಾಗಿ ಒಗ್ಗಟ್ಟಿನಿಂದ ಇದ್ದು, ದೇಶದ ಪ್ರಗತಿಗೆ ನಾಂದಿ ಆಗಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಪ್ರತಿಫಲವಾಗಿ ನಾವೆಲ್ಲರೂ ಸ್ವತಂತ್ರರಾಗಿ ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ದೇಶದ ಏಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ನಾವೆಲ್ಲರೂ ಶ್ರಮ ವಹಿಸಿ, ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಕಳೆದ ಎರಡು ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ಹಾಗೂ ಪಠ್ಯ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿಕೊಂಡು ಬಂದಿರುವುದು ಸಂತಸದ ವಿಚಾರ ಎಂದರು.