ಬೆಂಗಳೂರು: ಡಿಜೆ ಹಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕರ ಮನೆ ಒಳಗೆ ಬೆಂಕಿ ಹಚ್ಚಿದ್ದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಲಭೆಗೆ ಸಂಬಂಧಿಸಿ ಈಗಾಗಲೇ ಸುಮಾರು 400 ಆರೋಪಿಗಳನ್ನು ಬಂಧಿಸಲಾಗಿದೆ. ಇವತ್ತು ಸಹ ಭೇಟೆ ಮುಂದುವರೆಸಿರುವ ಪೊಲೀಸರು ಶಾಸಕರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಫಿರ್ದೋಸ್ ಹಾಗೂ ನಯೀಮ್ ಬಂಧಿತ ಆರೋಪಿಗಳು. ಬಂಧನದ ವೇಳೆ ಪೊಲೀಸರಿಗೆ ಕೆಲವು ಮಾರಕಾಸ್ತ್ರಗಳು ಸಿಕ್ಕಿವೆ. ಸದ್ಯ ಅವುಗಳನ್ನು ಯಾವ ಉದ್ದೇಶಕ್ಕೆ ಶಾಸಕರ ಮನೆಯ ಬಳಿ ತಗೊಂಡು ಹೋಗಿದ್ದರು ಎನ್ನುವ ಕುರಿತು ತನಿಖೆ ಮುಂದುವರೆದಿದೆ.
ಫೇಸ್ ಬುಕ್ ಮೂಲಕ ಪ್ರಚೋದಿಸಿದ್ದವನು ಸಿಸಿಬಿ ವಶಕ್ಕೆ..!
ಇನ್ನು ಶಾಸಕ ಅಖಂಡ ಶ್ರೀನಿವಾಸ್ ಅಳಿಯ ನವೀನ್ ಮನೆಗೆ ಬೆಂಕಿ ಹಾಕಿದ್ದ ಯೂಸೂಫ್ನ ವಿಚಾರಣೆ ಆಧರಿಸಿ ಮತ್ತೆ ನಾಲ್ವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಯೂಸೂಫ್ ಒಟ್ಟು 10 ಜನರ ಹೆಸರನ್ನ ಹೇಳಿದ್ದು, ಸ್ಪೆಷಲ್ ಟೀಂ ಕೈಗೆ ನಾಲ್ವರು ಆರೋಪಿಗಳು ಸಿಕ್ಕಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಸಿಸಿಬಿ ಪೊಲೀಸರು ಫೇಸ್ಬುಕ್ ಮೂಲಕ ಪ್ರಚೋದನೆ ಮಾಡಿದ ಮುದಾಸಿರ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.